ಕದನ ವಿರಾಮದಲ್ಲಿ ಅಮೆರಿಕ ಮಧ್ಯಸ್ಥಿಕೆ ಇಲ್ಲ : ಕೇಂದ್ರ

| N/A | Published : May 20 2025, 01:13 AM IST / Updated: May 20 2025, 04:53 AM IST

ಸಾರಾಂಶ

ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಮಿಲಿಟರಿ ಸಂಘರ್ಷದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂಸತ್ತಿನ ಸ್ಥಾಯಿ ಸಮಿತಿಗೆ ಸೋಮವಾರ ವಿವರ ನೀಡಿದರು.  

 ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಮಿಲಿಟರಿ ಸಂಘರ್ಷದ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂಸತ್ತಿನ ಸ್ಥಾಯಿ ಸಮಿತಿಗೆ ಸೋಮವಾರ ವಿವರ ನೀಡಿದರು. ಈ ವೇಳೆ ಅವರು, ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅಧ್ಯಕ್ಷತೆಯ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ ಮಿಸ್ರಿ,‘ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡು ನೆರೆಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ’ ಎಂದರು.

ಅಲ್ಲದೆ, ‘ಎರಡೂ ದೇಶಗಳ ನಡುವಿನ ಕದನ ಸಾಂಪ್ರದಾಯಿಕ ಶೈಲಿಯ ಯುದ್ಧವಾಗಿತ್ತು. ಪಾಕ್‌ನಿಂದ ಅಣ್ವಸ್ತ್ರ ಪ್ರಯೋಗದ ಯಾವುದೇ ಸಂಕೇತ ಲಭಿಸಿರಲಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್‌ನ ರಾಜೀವ್ ಶುಕ್ಲಾ, ದೀಪೆಂದರ್‌ ಹೂಡಾ, ಬಿಜೆಪಿಯ ಅಪರಾಜಿತಾ ಸಾರಂಗಿ, ಅರುಣ್ ಗೋವಿಲ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದರು.

ಕಾಂಗ್ರೆಸ್‌ನಿಂದ ತರೂರ್ ವಜಾಗೆ ಕೂಗು

ನವದೆಹಲಿ: ಕಾಂಗ್ರೆಸ್‌ನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಹೇಳಿಕೆ ನೀಡುತ್ತಿದ್ದ ಮತ್ತು ಇದೀಗ ಕೇಂದ್ರದ ಪಾಕ್‌ ಕುರಿತ ಸರ್ವಪಕ್ಷ ನಿಯೋಗದಲ್ಲಿ ಸ್ಥಾನ ಪಡೆದು ಸ್ವಪಕ್ಷೀಯರ ಕಂಗೆಣ್ಣಿಗೆ ಗುರಿಯಾಗಿರುವ ಸಂಸದ ಶಶಿ ತರೂರ್‌ರನ್ನುಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಪಕ್ಷದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅವರನ್ನು ಉಚ್ಚಾಟಿಸಿದರೆ ಅದು ಬಿಜೆಪಿಗೆ ಅಸ್ತ್ರವಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ ವರಿಷ್ಠರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ನಿಯೋಗಕ್ಕೆ ತರೂರ್‌ ಹೆಸರು ಸೂಚಿಸದಿದ್ದರೂ ಕೇಂದ್ರ ಆಯ್ಕೆ ಮಾಡಿರುವುದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣ. ಜೊತೆಗೆ ಪಕ್ಷದ ವಿರುದ್ಧ ಮಾತನಾಡುವುದು, ನಿಯೋಗದ ಭಾಗವಾದಾಗ ಪಕ್ಷದ ಅಭಿಪ್ರಾಯ ಕೇಳದೇ ತಕ್ಷಣವೇ ಸ್ವೀಕರಿಸಿರುವುದರಿಂದ ನಾಯಕರು ಸಿಟ್ಟಾಗಿದ್ದಾರೆ. ಪಕ್ಷದಲ್ಲಿ ತನ್ನದೇ ಪ್ರಭಾವ ಹೊಂದಿದ್ದರೂ ಆಗಾಗ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್‌ಗೂ ಇರಿಸು ಮುರಿಸು. ಹೀಗಾಗಿ ಅವರ ಉಚ್ಚಾಟನೆ ಮಾಡಬೇಕು ಎನ್ನುವ ಅಭಿಪ್ರಾಯವನ್ನು ಹಲವು ನಾಯಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈಗ ಮಾತ್ರವಲ್ಲ, ಈ ಹಿಂದೆಯೂ ಹಲವು ಸಲ ತರೂರ್‌ ಬಿಜೆಪಿ ಪರ ಮಾತನಾಡಿದ್ದರು. ಇದೇ ನಡೆ ಮುಂದುವರೆಸಿದರೆ ಪಕ್ಷಕ್ಕೆ ಹಾನಿಯಾಗಲಿದೆ. ಅದರಲ್ಲಿಯೂ 2026ರ ಕೇರಳ ವಿಧಾನಸಭೆ ಚುನಾವಣೆಗೆ ಹಿನ್ನೆಡೆಯಾಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಈಗಾಗಲೇ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್‌ ಸೇರಿದಂತೆ ಕೆಲ ನಾಯಕರು ಪಕ್ಷದಿಂದ ಮುನಿಸಿಕೊಂಡು ಹೊರ ನಡೆದಿದ್ದರು. ತರೂರ್‌ ಆ ಆಘಾತ ನೀಡುವ ಬದಲು ನಾವೇ ಅವರನ್ನು ಪಕ್ಷದಿಂದ ಹೊರ ಕಳುಹಿಸಿದರೆ ಉತ್ತಮ ಎನ್ನುವುದು ಕೆಲವರ ಅಭಿಪ್ರಾಯ.

ಕಾದು ನೋಡುವ ತಂತ್ರ?ಈ ವಿಚಾರದಲ್ಲಿ ಕಾಂಗ್ರೆಸ್‌ಗೆ ಕೆಲ ಸವಾಲಿದೆ. ಈಗ ಉಚ್ಚಾಟನೆ ಮಾಡಿದರೆ ಬಿಜೆಪಿಗೆ ದೊಡ್ಡ ಅಸ್ತ್ರವಾಗಲಿದೆ. ಮಾತ್ರವಲ್ಲದೇ ಆಪರೇಷನ್ ಸಿಂದೂರ, ಪಹಲ್ಗಾಂ ನರಮೇಧದಲ್ಲಿ ಬಿಜೆಪಿಗೆ ಬೆಂಬಲ ಎಂದಿರುವ ಪಕ್ಷದ ನಿಲುವು ಸಂಪೂರ್ಣ ವ್ಯರ್ಥವಾಗಲಿದೆ. ಹೀಗಾಗಿ ತರೂರ್ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ, ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್‌ ಮೊರೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ಸರ್ವಪಕ್ಷ ನಿಯೋಗ ಸದಸ್ಯತ್ವಕ್ಕೆ ಟಿಎಂಸಿ ಸಂಸದ ಪಠಾಣ್‌ ನಕಾರ

ಕೋಲ್ಕತಾ: ಅಂರಾತಾಷ್ಟ್ರೀಯ ಮಟ್ಟದಲ್ಲಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ವಿದೇಶಗಳಿಗೆ ತೆರಳಲಿದ್ದ ಸರ್ವಪಕ್ಷಗಳ 7 ನಿಯೋಗಗಳ ಭಾಗವಾಗಿ ಆಯ್ಕೆಯಾಗಿದ್ದ ಟಿಎಂಸಿ ಸಂಸದ ಯೂಸುಫ್‌ ಪಠಾಣ್‌ ಇದೀಗ ಆ ನಿಯೋಗದಿಂದ ಹೊರಬರಲು ನಿರ್ಧರಿಸಿದ್ದಾರೆ.ನಿಯೋಗದ ಭಾಗವಾಗಲು ಪಠಾಣ್‌ಗೆ ಪಕ್ಷದಿಂದ ಯಾವುದೇ ಸೂಚನೆ ಇರಲಿಲ್ಲ.

 ಅಲ್ಲದೆ, ಟಿಎಂಸಿಗೆ ಪೂರ್ವ ಮಾಹಿತಿಯನ್ನೂ ಕೇಂದ್ರ ಸರ್ಕಾರ ನೀಡಿರಲಿಲ್ಲ. ಆದರೂ ಅವರನ್ನು ಸಂಜಯ್‌ ಝಾ ಅವರ ನೇತೃತ್ವದ ನಿಯೋಗಕ್ಕೆ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಸೂಚನೆ ಮೇರೆಗೆ ಪಠಾಣ್‌ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಟಿಎಂಸಿ, ‘ನಾವು ನಿಯೋಗಕ್ಕೆ ಬಹಿಷ್ಕಾರ ಹಾಕುತ್ತಿಲ್ಲ. ನಮ್ಮಿಂದ ಶಿಫಾರಸಾದ ಸದಸ್ಯರ ಹೆಸರಿಗೆ ಸರ್ಕಾರ ಒಪ್ಪಿದರೆ ಅವರನ್ನು ಕಳಿಸಲು ಸಿದ್ಧ’ ಎಂದಿದೆ.

Read more Articles on