ಸಾರಾಂಶ
ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಮದನ್ ಬಿ. ಲೋಕೂರ್ ಅವರು ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನ್ಯಾ.ಲೋಕೂರ್ ಅವರ ಅಧಿಕಾರವಧಿ 2028ರ ನ.12ರ ತನಕ ಇರಲಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರೆಸ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಮತ್ತು ಇತರ ಪ್ರಸಿದ್ಧ ನ್ಯಾಯಶಾಸ್ತ್ರಜ್ಞರು ಈ ಆಡಳಿತ ಮಂಡಳಿಯಲ್ಲಿ ಇರಲಿದ್ದು, ನ್ಯಾ. ಲೋಕೂರ್ ಈ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ’ ಎಂದಿದ್ದಾರೆ.
ನ್ಯಾ. ಲೋಕೂರ್ 2012ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡು 2018ರಲ್ಲಿ ನಿವೃತ್ತಿ ಹೊಂದಿದ್ದರು. ಅದಾದ ಬಳಿಕ ಫಿಜಿ ದೇಶದ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು.
ಮುಂಬೈ ಪ್ರವಾಸಿ ಹಡಗು ದುರಂತದ ಬಾಲಕನ ಶವ ಪತ್ತೆ: ಸಾವಿನ ಸಂಖ್ಯೆ15ಕ್ಕೆ
ಮುಂಬೈ: ಎಲಿಫೆಂಟಾ ದ್ವೀಪದ ಬಳಿ ನಡೆದಿದ್ದ ನೌಕಾ ಪಡೆಯ ಸ್ಪೀಡ್ ಬೋಟ್ ಮತ್ತು ಪ್ರವಾಸಿ ಹಡಗಿನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿಕೆಯಾಗಿದೆ. ಡಿ.18ರಂದು ದುರಂತ ನಡೆದ ಬಳಿಕ ಪ್ರವಾಸಿ ಹಡಗಿನಲ್ಲಿದ್ದ 7 ವರ್ಷದ ಬಾಲಕ ಜೋಹಾನ್ ಮೊಹಮ್ಮದ್ ನಿಸಾರ್ ಅಹಮದ್ ಪಠಾಣ್ ನಾಪತ್ತೆಯಾಗಿದ್ದ. ಬಾಲಕನ ಪತ್ತೆಗೆ ರಕ್ಷಣಾ ಸಿಬ್ಬಂದಿ ಸತತ ಶೋಧ ಕಾರ್ಯ ನಡೆಸಿದ್ದು, ಘಟನೆ ನಡೆದ ಮೂರು ದಿನದ ಬಳಿಕ ಬಾಲಕನ ಶವ ಪತ್ತೆಯಾಗಿದೆ. ನೌಕಾಪಡೆಯ ಸ್ಪೀಡ್‌ಬೋಟ್‌ನ ಎಂಜಿನ್‌ನಲ್ಲಿ ದೋಷ ಕಂಡುಬಂದ ಕಾರಣ ಅದು ಹಡಗಿಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಥಿಯೇಟರ್ ಭೇಟಿ: ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಜಟಾಪಟಿ
ಹೈದರಾಬಾದ್: ಇತ್ತೀಚೆಗೆ ಹೈದ್ರಾಬಾದ್‌ನ ಥಿಯೇಟರ್‌ನಲ್ಲಿ ಪುಷ್ಪಾ2 ಚಿತ್ರ ಪ್ರದರ್ಶನದ ವೇಳೆ ನಡೆದ ಕಾಲ್ತುಳಿತ ಪ್ರಕರಣ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ನಟ ಅಲ್ಲು ಅರ್ಜುನ್ ನಡುವೆ ಜಟಾಪಟಿಗೆ ಕಾರಣವಾಗಿದೆ. ಅಂದು ಥಿಯೇಟರ್ ಬಳಿ ತೆರಳಲು ಪೊಲೀಸರು ಅನುಮತಿ ನಿರಾಕರಿಸಿದ್ದರೂ ಕೂಡಾ ಅಲ್ಲು ಅರ್ಜುನ್ ಅಲ್ಲಿಗೆ ತೆರಳಿದ್ದರು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದರೂ ಕೂಡಾ ಅವರು ಚಿತ್ರಮಂದಿರದಿಂದ ಹೊರಬಂದಿರಲಿಲ್ಲ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಅಲ್ಲು ಅರ್ಜುನ್ ‘ ಈ ಆರೋಪ ಸುಳ್ಳು. ಇದು ನನ್ನನ್ನು ಅವಮಾನಿಸುವುದು ಮತ್ತು ನನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ಆರೋಪ. ಮಹಿಳೆ ಸಾವನ್ನಪ್ಪಿದ್ದು ನನಗೆ ಗೊತ್ತಾಗಿದ್ದೇ ಮಾರನೇ ದಿನ’ ಎಂದು ಹೇಳಿದ್ದಾರೆ.
ಜರ್ಮನಿಯ ಮಾರುಕಟ್ಟೆ ಕಾರು ದಾಳಿಗೆ 5 ಸಾವು: ಉಗ್ರ ಕೃತ್ಯದ ಶಂಕೆ
ಮ್ಯಾಗ್ಡೆಬರ್ಗ್(ಜರ್ಮನಿ): ಶುಕ್ರವಾರ ರಾತ್ರಿ ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಕಾರು ಹರಿಸಿದ್ದು, ದುರ್ಘಟನೆಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಈ ಪೈಕಿ 40 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸೌದಿ ಅರೇಬಿಯಾದ ವೈದ್ಯನೊಬ್ಬ ಬಿಎಂಡಬ್ಲ್ಯೂ ಶುಕ್ರವಾರ ಸಂಜೆ ಈ ಕೃತ್ಯ ನಡೆಸಿದ್ದಾನೆ. ಕ್ರಿಸ್‌ಮಸ್ , ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಈ ಹಿಂಸಾಚಾರವು ನಗರ ಜನತೆಯನ್ನು ಬೆಚ್ಚಿ ಬೀಳಿಸಿದೆ. ದಾಳಿಯ ಹಿಂದೆ ಉಗ್ರ ಕೃತ್ಯದ ಶಂಕೆ ವ್ಯಕ್ತವಾಗಿದೆ.