ಸಾರಾಂಶ
ಚಂಡೀಗಢ: ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಆರೋಪ ಹೊತ್ತಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಹರ್ಯಾಣ ಪೊಲೀಸರ ವಿಶೇಷ ತನಿಖಾ ತಂಡ, ನ್ಯಾಯಾಲಯಕ್ಕೆ 2500 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.
‘ಟ್ರಾವೆಲ್ ವಿತ್ ಜೋ ಯೂಟ್ಯೂಬರ್ ಹೆಸರಿನ ಯೂಟ್ಯೂಬ್ ಚಾನೆಲ್ ನೆಡೆಸುತ್ತಿದ್ದ ಜ್ಯೋತಿ, ಭಾರತದಲ್ಲಿನ ಪಾಕಿಸ್ತಾನ ದೂತಾವಾಸ ಕಚೇರಿಯ ಎಹ್ಸಾನ್ ಉರ್ ರಹೀಂ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಕನಿಷ್ಠ 2 ಬಾರಿ ಪಾಕಿಸ್ತಾನಕ್ಕೆ ತೆರಳಿದ್ದಳು. ಜತೆಗೆ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐನ ಶಕೀರ್, ಹಸನ್ ಅಲಿ ಮತ್ತು ನಾಸಿರ್ ಧಿಲ್ಲೋನ್ ಎಂಬುವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಬಹುಕಾಲದಿಂದ ರಹಸ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಳು’ ಎಂದು ಚಾರ್ಜ್‌ಶೀಟ್ ಹೇಳಿದೆ.
‘ಏ.17ಕ್ಕೆ ಪಾಕ್‌ಗೆ ಹೋಗಿ ಮೇ 15ರಂದು ಭಾರತಕ್ಕೆ ಹಿಂದಿರುಗಿದ್ದಳು. ಬಳಿಕ ಜೂ.10ರಂದು ಚೀನಾಗೆ ತೆರಳಿ ಜುಲೈನಲ್ಲಿ ಅಲ್ಲಿಂದ ನೇಪಾಳಕ್ಕೆ ಬಂದಿದ್ದಳು. ಈ ಹಿಂದೆ ಕರ್ತಾರ್‌ಪುರ ಕಾರಿಡಾರ್‌ಗೆ ತೆರಳಿದ್ದಾಗ ಪಾಕ್ ಪಂಜಾಬ್ ಪ್ರಾಂತ್ಯದ ಸಿಎಂ, ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ, ಮಾರ್ಯಂ ನವಾಜ್‌ರನ್ನು ಸಂದರ್ಶನ ಮಾಡಿದ್ದಳು. ಆಪರೇಷನ್ ಸಿಂದೂರದ ವೇಳೆ ಪಾಕ್ ಹೈಕಮಿಷನ್ ಜತೆಗೆ ಸಂಪರ್ಕ ಹೊಂದಿದ್ದಳು ಎಂದು ಚಾರ್ಜ್‌ಶೀಟ್ ಹೇಳಿದೆ’ ಮೂಲಗಳು ತಿಳಿಸಿವೆ.