ಸಾರಾಂಶ
ಹುಬ್ಬಳ್ಳಿ: ಕಾಂಗ್ರೆಸ್ ದೇಶದ ಹಿತವನ್ನು ಮರೆತು ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಾಳುತ್ತಿದೆ. ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುತ್ತಿದೆ. ಮಾಲೇಗಾಂವ್ ಪ್ರಕರಣದ ನಂತರದ ಘಟನೆಗಳಲ್ಲಿ ಕಾಂಗ್ರೆಸ್ ನಡೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ಅಧಿಕಾರದಲ್ಲಿದ್ದ ಶರದ್ ಪವಾರರ ಪಕ್ಷ ಹಿಂದೂ ಟೆರರ್ ಎಂದು ಹೇಳುವ ಪ್ರಯತ್ನವನ್ನು ಮಾಡಿತ್ತು. ಜತೆಗೆ ತನಿಖೆಯನ್ನೂ ಬಂದ್ ಮಾಡಿತ್ತು. ಸಂಜೋತಾ ಹಾಗೂ ಮಾಲೇಗಾಂವ್ ಲಿಂಕ್ ಮಾಡಿದ್ದರು. ಮಾಲೇಗಾಂವ್‌ನಲ್ಲಿ ಮುಸ್ಲಿಮರು ಯಾಕೆ ಬಾಂಬ್ ಸ್ಫೋಟ ಮಾಡುತ್ತಾರೆ ಎಂದಿದ್ದರು. ಅಲ್ಲದೆ, ಹಿಂದೂ ಟೆರರ್ ಎಂದು ಹೇಳಿ ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿದರು ಎಂದು ಆರೋಪಿಸಿದರು.ನಾವು ಪಾಕಿಸ್ತಾನವನ್ನು ಜಗತ್ತಿನಲ್ಲಿ ಬೆತ್ತಲೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆವು. ಮಾಲೇಗಾಂವ್‌ದಲ್ಲಿ ಆರಂಭಿಕ ಆರೋಪಿಗಳನ್ನು ಬಿಡಿಸುವ ಕೆಲಸ ಮಾಡಿದರು. ದಿಗ್ವಿಜಯ ಸಿಂಗ್ ಮುಂಬೈನಲ್ಲಿ ಆರ್‌ಎಸ್‌ಎಸ್‌ನವರು ಬ್ಲಾಸ್ಟ್ ಮಾಡಿದ್ದಾರೆ ಎಂದಿದ್ದರು. ಇವರೆಲ್ಲ ದೇಶದಲ್ಲಿ ಹೀರೋ ಆಗುವುದನ್ನು ಬಿಟ್ಟು ಪಾಕಿಸ್ತಾನದಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ ಎಂದರು.
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ದೇಶಕ್ಕೆ ದ್ರೋಹ ಮಾಡಿದ್ದಾರೆ. 3 ಜನ ಪಾಕಿಸ್ತಾನದವರು ಎನ್ನುವುದಕ್ಕೆ ಸಾಕ್ಷಿ ಏನು ಎಂದು ಚಿದಂಬರಂ ಕೇಳಿದ್ದರು. ಕಾಂಗ್ರೆಸ್ಸಿನ ಮನಸ್ಥಿತಿ ದೇಶದಲ್ಲಿ ಯಾವ ಮಟ್ಟಕ್ಕೆ ಹೋಗುತ್ತಿದೆ? ದೇಶದ ಹಿತಕ್ಕೆ ಕಾಂಗ್ರೆಸ್ ವರ್ತನೆ ದುರ್ದೈವದ ಸಂಗತಿ ಎಂದರು.ಮಹದಾಯಿ ವಾಸ್ತವ ಸ್ಥಿತಿ: ಮಹದಾಯಿ ವಿಚಾರದಲ್ಲಿ ಈ ವರೆಗೆ ಆಗಿರುವ ಪ್ರಗತಿ ಬಿಜೆಪಿ ಕಾಲದಲ್ಲಿ ಆಗಿದೆ. ಮಹದಾಯಿ ಕುರಿತು ಸಭೆಯಲ್ಲಿ ರೈತ ಮುಖಂಡರಿಗೆ ವಾಸ್ತವ ಸ್ಥಿತಿ ಹೇಳಿದ್ದೇನೆ. ಗೋವಾ ಆರ್ಡರ್ ಬಗ್ಗೆ ಕರ್ನಾಟಕ ಸುಪ್ರೀಂ ಕೋರ್ಟಿಗೆ ಹೋಗಿದೆ. ರೈತ ಮುಖಂಡರೇ ದೆಹಲಿಗೆ ಬರುತ್ತೇವೆ ಎಂದು ಹೇಳಿದ್ದಾರೆ ಎಂದರು.
ರಾಹುಲ್ ಗಾಂಧಿ ದೇಶದಲ್ಲಿ ಆರ್ಥಿಕತೆ ಸತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ, ಅವರ ಆಡಳಿತದಲ್ಲಿ ಭಾರತ ದುರ್ಬಲ ಆರ್ಥಿಕತೆಯ ಜಗತ್ತಿನ ಐದನೆಯ ದೇಶವಾಗಿತ್ತು. ಇದೀಗ ಜಗತ್ತಿನಲ್ಲಿ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶ ನಮ್ಮದಾಗಿದೆ ಎಂದರು.ಖಲಿಸ್ತಾನಿ ಟೆರರಿಸ್ಟ್ ಜತೆ ರಾಹುಲ್ ಗಾಂಧಿ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಹಸ್ತಕ್ಷೇಪ: ಧರ್ಮಸ್ಥಳ ಪ್ರಕರಣದ ಕುರಿತಂತೆ ರಾಜ್ಯ ಸರ್ಕಾರ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಕೇರಳ ಸರ್ಕಾರಕ್ಕೂ ಇದಕ್ಕೂ ಏನು ಸಂಬಂಧ? ಎಸ್ಐಟಿ ವರದಿಗೂ ಮುಂಚೆಯೇ ಭಾರಿ ಅಪರಾಧ ಆಗಿದೆ ಎನ್ನುವ ಹಾಗೆ ಬಿಂಬಿಸುವುದು ಸರಿಯಲ್ಲ. ತನಿಖೆಯ ವರದಿ ಬರುವ ವರೆಗೂ ಎಲ್ಲರೂ ಕಾಯಬೇಕು. ಎಡ ಪಕ್ಷಗಳು, ಹಿಂದೂ ವಿರೋಧಿ ಶಕ್ತಿಗಳು ಧರ್ಮಸ್ಥಳ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಕೋರ್ಟಿದೆ, ಕಾನೂನು ಇದೆ. ಡಾ. ವೀರೇಂದ್ರ ಹೆಗ್ಗಡೆ ಅವರೂ ತನಿಖೆಯನ್ನು ಸ್ವಾಗತಿಸಿದ್ದಾರೆ. ತನಿಖೆಗೂ ಮುಂಚೆಯೇ ಇಷ್ಟೆಲ್ಲ ಏಕೆ ಮಾತನಾಡಬೇಕು? ಧರ್ಮಸ್ಥಳ ಭಾರತದ ಪ್ರಮುಖ ಶ್ರದ್ಧಾಕೇಂದ್ರ. ಅಕಸ್ಮಾತ್ ಯಾರಾದರೂ ತಪ್ಪೆಸಗಿದ್ದರೆ ಎಸ್ಐಟಿ ತನಿಖೆಯಲ್ಲಿ ಬಹಿರಂಗವಾಗುತ್ತದೆ ಎಂದರು.ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ. ಇದರಿಂದ ನಮಗ್ಯಾಕೆ ಮುಜುಗರ ಆಗುತ್ತೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.