ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು

| N/A | Published : Jun 10 2025, 12:11 PM IST / Updated: Jun 10 2025, 01:57 PM IST

ಸಾರಾಂಶ

ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜನದಟ್ಟಣೆಯಿಂದ ಕೂಡಿದ್ದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್‌ ರೈಲಿನಲ್ಲಿ ಅತೀವ ನೂಕು ನುಗ್ಗಲು ಉಂಟಾಗಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಐವರು ಸಾವನ್ನಪ್ಪಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ.

 ಮುಂಬೈ : ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜನದಟ್ಟಣೆಯಿಂದ ಕೂಡಿದ್ದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್‌ ರೈಲಿನಲ್ಲಿ ಅತೀವ ನೂಕು ನುಗ್ಗಲು ಉಂಟಾಗಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಐವರು ಸಾವನ್ನಪ್ಪಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ.ಮುಂಬೈನ ದಿವಾ ಮತ್ತು ಕೋಪರ್‌ ರೈಲು ನಿಲ್ದಾಣಗಳ ನಡುವಿನ ಮುಂಬ್ರಾ ಬಳಿ ರೈಲು ಸಾಗುತ್ತಿದ್ದಾಗ ಬೆಳಗ್ಗೆ 9.30ಕ್ಕೆ ಅನಾಹುತ ಸಂಭವಿಸಿದೆ. ಆ ಸಮಯದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೀಗಾಗಿ ಜನರು ರೈಲಿನ ಬಾಗಿಲಿಗೆ ನೇತಾಡಿಕೊಂಡು ಚಲಿಸುತ್ತಿದ್ದರು. ಈ ಸಂದರ್ಭದಲ್ಲಿ ರೈಲು ಚಲಿಸುವಾಗಲೇ ಉಂಟಾದ ನೂಕು ನುಗ್ಗಲಿನಿಂದ ಸುಮಾರು 10 ಮಂದಿ ಪ್ರಯಾಣಿಕರು ಕೆಳಗ್ಗೆ ಬಿದ್ದಿದ್ದಾರೆ. ಕಾವಲುಗಾರರೊಬ್ಬರು ಗಮನಿಸಿದಾಗ ಅಪಘಾತದ ವಿಚಾರ ಬೆಳಕಿಗೆ ಬಂದಿದೆ.

ಆರಂಭದಲ್ಲಿ ರೈಲು ಹಳಿ ಮೇಲೆ ಬಿದ್ದವರು ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಿಂದ ಬಿದ್ದವರು ಎಂದು ಹೇಳಲಾಗಿತ್ತು. ಆ ಬಳಿಕ ಅದು ಥಾಣೆಯಿಂದ ಮುಂಬೈನ ಸಿಎಸ್‌ಟಿ ಕಡೆಗೆ ತೆರಳುತ್ತಿದ್ದ ಲೋಕಲ್‌ ರೈಲಿನಿಂದ ಕೆಳಗೆ ಬಿದ್ದಿರುವ ವಿಚಾರ ಬಯಲಾಗಿದೆ. ಘಟನೆಯಲ್ಲಿ ಐದು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಇನ್ನುಳಿದ ಐವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು 30-35 ವರ್ಷದ ಆಸುಪಾಸಿನವರಾಗಿದ್ದಾರೆ. ಇನ್ನು ಘಟನೆಗೆ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂಬೈ ರೈಲಿಗೆ ಇನ್ನು ಸ್ವಯಂಚಾಲಿತ ಬಾಗಿಲು

ರೈಲು ದುರಂತದ ಹಿನ್ನೆಲೆಯಲ್ಲಿ ಮುಂಬೈ ಉಪನಗರ ರೈಲುಗಳಿಗೆ ಇನ್ನು ಸ್ವಯಂಚಾಲಿತ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚುವ ಬಾಗಿಲು ಅಳವಡಿಸಲಾಗುವುದು ಎಂದು ಭಾರತೀಯ ರೈಲ್ವೆ ಸೋಮವಾರ ಘೋಷಿಸಿದೆ. ಇದರ ಅಂಗವಾಗಿ ಈಗಿನ ಎಲ್ಲ ರೇಕ್‌ಗಳಿಗೆ ಹಂತ ಹಂತವಾಗಿ ಸ್ವಯಂಚಾಲಿತ ಬಾಗಿಲು ಹಾಕಲಾಗುವುದು ಎಂದು ಅದು ತಿಳಿಸಿದೆ.

Read more Articles on