ಸಾರಾಂಶ
ಅಮರಾವತಿ : ಕರ್ನಾಟಕ ಮಾದರಿಯಲ್ಲಿ ಆಂಧ್ರಪ್ರದೇಶ ಮಹಿಳೆಯರಿಗಾಗಿ ಉಚಿತ ಸಾರಿಗೆ ಯೋಜನೆ ಜಾರಿಗೆ ಮುಂದಾಗಿದೆ. 2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು ಸರ್ಕಾರ ಆ.15ರಿಂದ ಯೋಜನೆ ಆರಂಭಿಸಲಿದೆ.
‘ಸ್ತ್ರೀ ಶಕ್ತಿ’ ಹೆಸರಿನ ಯೋಜನೆ ಎಲ್ಲ ಬಾಲಕಿಯರು, ಮಂಗಳಮುಖಿಯರಿಗೂ ಉಚಿತ ಪ್ರಯಾಣವನ್ನು ಕಲ್ಪಿಸುತ್ತಿದೆ. ಇವರೆಲ್ಲ ಅಲ್ಲಿಯ ವಾಸದ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಯೋಜನೆ ಆ.15ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ’ ಎಂದು ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ಸೋಮವಾರ ಹೇಳಿದ್ದಾರೆ.
ಯೋಜನೆಗೆ ಎಪಿಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಲಾಗುತ್ತದೆ. ಸ್ಥಳೀಯ ಬಸ್‌ಗಳಾದ ಪಲ್ಲೆವೆಲುಗು, ಅಲ್ಟ್ರಾ ಪಲ್ಲೆವೆಲುಗು, ಸಿಟಿ ಆರ್ಡಿನರಿ, ಮೆಟ್ರೋ ಎಕ್ಸ್‌ಪ್ರೆಸ್ ಮತ್ತು ಎಕ್ಸ್‌ಪ್ರೆಸ್ ಸೇವೆಗಳ ಬಸ್‌ಗಳಲ್ಲಿ ಮಾತ್ರ ಯೋಜನೆ ಅನ್ವಯವಾಗುತ್ತದೆ.
ಯೋಜನೆಗೆ ವಾರ್ಷಿಕ 1,942 ಕೋಟಿ ರು. ವೆಚ್ಚ ಎಂದು ಅಂದಾಜಿಸಲಾಗಿದೆ.