ಸಾರಾಂಶ
ಇತಿಹಾಸದಲ್ಲಿ 3ನೇ ಬಾರಿ ಭರ್ತಿಯಾಗಿರುವ ಜಿಲ್ಲೆಯ ಏಕ ಮಾತ್ರ ಜಲಪಾತ್ರೆ ಮಾರಿಕಣಿವೆ ಡ್ಯಾಂ (ವಿವಿ ಸಾಗರ ಜಲಾಶಯ) ಮೇಲೆ ಆಂಧ್ರ ಪ್ರದೇಶದ ಕಣ್ಣು ಬಿದ್ದಿದ್ದು 20 ಟಿಎಂಸಿ ನೀರು ಹರಿಸುವಂತೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ.
ಚಿತ್ರದುರ್ಗ : ಇತಿಹಾಸದಲ್ಲಿ 3ನೇ ಬಾರಿ ಭರ್ತಿಯಾಗಿರುವ ಜಿಲ್ಲೆಯ ಏಕ ಮಾತ್ರ ಜಲಪಾತ್ರೆ ಮಾರಿಕಣಿವೆ ಡ್ಯಾಂ (ವಿವಿ ಸಾಗರ ಜಲಾಶಯ) ಮೇಲೆ ಆಂಧ್ರ ಪ್ರದೇಶದ ಕಣ್ಣು ಬಿದ್ದಿದ್ದು 20 ಟಿಎಂಸಿ ನೀರು ಹರಿಸುವಂತೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ. ಅಂತರಾಜ್ಯ ಜಲ ವಿವಾದ, ಟ್ರಿಬ್ಯುನಲ್‌ಗಳ ಕಣ್ಗಾವಲುಗಳ ಸೂಕ್ಷ್ಮ ಅರಿಯದಾದರಾ ಸಚಿವ ಡಿ.ಸುಧಾಕರ್ ಹಾಗೂ ರೈತ ಹೋರಾಟಗಾರರು ಎಂಬ ಅನುಮಾನಗಳು ಮೂಡಿವೆ. ಅರ್ಧ ಟಿಎಂಸಿಗಾಗಿ ಹಿರಿಯೂರಿನಲ್ಲಿ ನಡೆಯುತ್ತಿರುವ ಹೋರಾಟಗಳು ವಿವಿ ಸಾಗರ ಜಲಾಶಯಕ್ಕೆ ಜಲ ಕಂಟಕ ಅಪಾಯ ತಂದೊಡ್ಡಬಹುದು.
ವಿವಿ ಸಾಗರದ ಜಲಾಶಯದಿಂದ ಗಾಯತ್ರಿ ಜಲಾಶಯ ಹಾಗೂ ಇತರೆ 15 ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಪಟ್ಟು ಹಿಡಿದಿರುವುದು, ಅಮರಣಾಂತರ ಉಪವಾಸ ಸತ್ಯಾಗ್ರಹದಂತಹ ಹೋರಾಟಗಳಿಗೆ ಮುಂದಾಗಿರುವುದು, ನೀರು ಹರಿಸುವ ಸಂಬಂಧ ಸಚಿವ ಡಿ.ಸುಧಾಕರ್ ರಾಜ್ಯ ಮಟ್ಟದಲ್ಲಿ ಪ್ರಯತ್ನ ನಡೆಸಿರುವುದು ಆಂಧ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸಿದ್ದು ವಿವಿ ಸಾಗರದಲ್ಲಿ ಸಂಗ್ರಹವಾಗಿರುವ ನೀರಿನ ಮೇಲೆ ಹಕ್ಕು ಪ್ರತಿಪಾದಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸುಳಿವುಗಳು ಲಭ್ಯವಾಗಿವೆ. ಹಾಗೊಂದು ವೇಳೆ ಆಂಧ್ರವೇನಾದರೂ ಇಂತಹ ಸಾಹಸಕ್ಕೆ ಕೈ ಹಾಕಿದರೆ ಇಡೀ ವಿವಿ ಸಾಗರ ಜಲಾಶಯವನ್ನು ಬರಿದು ಮಾಡಿಕೊಳ್ಳಬೇಕಾಗುತ್ತದೆ. ಅರ್ಧ ಟಿಎಂಸಿ ನೀರಿಗಾಗಿ ಕಸರತ್ತು ನಡೆಸಿರುವ ಸಚಿವ ಡಿ.ಸುಧಾಕರ್ ಮುಂದೊಂದು ದಿನ ತಾವೇ ಜಲಾಶಯ ಬರಿದಾಗುವುದ ಕಣ್ತುಂಬಿಕೊಳ್ಳಬೇಕಾಗುತ್ತದೆ.
30 ಟಿಎಂಸಿ ಸಾಮರ್ಥ್ಯದ ವಿವಿ ಸಾಗರ ಜಲಾಶಯ 3ನೇ ಬಾರಿ ಭರ್ತಿಯಾಗಿರುವುದು ಸಹಜವಾಗಿಯೇ ಜಿಲ್ಲೆಯ ರೈತಾಪಿ ಜನರಲ್ಲಿ ಸಂತಸ ತಂದಿದೆ. ಆದರೆ ತುಂಬಿರುವ ಜಲಾಶಯದಲ್ಲಿನ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಜಿಲ್ಲೆಯ ರೈತರು ಹಕ್ಕು ಪ್ರತಿ ಪಾದನೆ ಮಾಡುವಂತಿಲ್ಲ. ಕೃಷ್ಣಾ ಕೊಳ್ಳದಲ್ಲಿ ಲಭ್ಯವಾಗುವ ನೀರು ಕರ್ನಾಟಕ, ಮಹರಾಷ್ಟ್ರ, ಆಂಧ್ರಗಳಿಗೆ ಹಂಚಿಕೆಯಾಗಿದೆ. ಇದರಲ್ಲಿ ವಿವಿ ಸಾಗರ ಜಲಾಶಯಕ್ಕೆ ಕೇವಲ 5.25 ಟಿಎಂಸಿ ನೀರು ಸಂಗ್ರಹದ ಪರಿಗಣನೆ ಮಾಡಲಾಗಿದೆ. ಕಳೆದ ನೂರು ವರ್ಷದ ಮಳೆ ಹಾಗೂ ವಿವಿ ಸಾಗರಕ್ಕೆ ಹರಿದು ಬಂದ ನೀರಿವ ಪ್ರಮಾಣ ಆಧರಿಸಿ 5.25 ಟಿಎಂಸಿಗೆ ನೀರು ಲಭ್ಯತೆಗೆ ಸೀಮಿತಗೊಳಿಸಲಾಗಿದೆ. ಕೃಷ್ಣ ಕೊಳ್ಳದಲ್ಲಿನ ಒಟ್ಟಾರೆ ಕರ್ನಾಟಕದ ಪಾಲಿಗೆ ಸಿಗುವ 734 ಟಿಎಂಸಿ ನೀರಿನಲ್ಲಿ ವಿವಿ ಸಾಗರದಲ್ಲಿನ ನೀರಿನ ಲಭ್ಯತೆಯ 5.25 ಟಿಎಂಸಿ ಯಷ್ಟೇ. ಇಷ್ಟು ಪ್ರಮಾಣದ ನೀರನ್ನು ಜಲಾಶಯದಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳಬಹುದಾಗಿದೆ. ಉಳಿದ ನೀರಿನ ಮೇಲೆ ಹಕ್ಕು ಪ್ರತಿಪಾದನೆ ಮಾಡುವಂತಿಲ್ಲ.
ವಿವಿ ಸಾಗರದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸುವಂತೆ ಸಚಿವ ಡಿ.ಸುಧಾಕರ್ ರಾಜಧಾನಿಗೆ ಒಯ್ದಿದ್ದ ಪ್ರಸ್ತಾವನೆಯ ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳು ನಯವಾಗಿ ತಿರಸ್ಕರಿಸಿವೆ. ವಿವಿ ಸಾಗರದಲ್ಲಿ ಹೆಚ್ಚುವರಿ ನೀರು ಇಲ್ಲದ ಕಾರಣ ಕೊಡಲು ಸಾಧ್ಯವಿಲ್ಲವೆಂಬ ಅಂಶವ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಮ್ಮ ಸರ್ಕಾರದ ಅಧೀನ ಅಧಿಕಾರಿಗಳು ನೀಡಿದ ವಾಸ್ತವಾಂಶ ವರದಿಯ ಪರಿಗಣಿಸಿ ಸುಮ್ಮನಾಗಬೇಕಿದ್ದ ಸಚಿವ ಡಿ.ಸುಧಾಕರ್ ಮರಳಿಯತ್ನಕ್ಕೆ ಮುಂದಾಗಿದ್ದಾರೆ. ಈ ವಿಚಾರದಲ್ಲಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಆಂಧ್ರ ಗಮನಿಸುತ್ತಿದ್ದು ಭವಿಷ್ಯದಲ್ಲಿ ಮಾರಿಕಣಿವೆಗೆ ಕಂಟಕವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ತುಂಗ ಭದ್ರಾ, ಆಲಮಟ್ಟಿ ಸೇರಿದಂತೆ ವಿವಿ ಸಾಗರ ಜಲಾಶಯದ ನೀರಿನ ಸಂಗ್ರಹದ ಮೇಲೆ ಆಂಧ್ರ ಪ್ರದೇಶ ಸರ್ಕಾರ ಸದಾ ಒಂದು ಕಣ್ಣಟ್ಟಿದೆ. ಇಲ್ಲಿ ಸಂಗ್ರಹವಾಗುವ ಪ್ರತಿ ಹನಿ ನೀರಿನ ಲೆಕ್ಕ ಪಡೆದುಕೊಳ್ಳುತ್ತದೆ. ಕಳೆದ ಎರಡು ವರ್ಷ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಅಪಾರ ಪ್ರಮಾಣದಲ್ಲಿ ಆಂಧ್ರಕ್ಕೆ ನೀರು ಹರಿದು ಹೋದದ್ದರಿಂದ ನೀರಿನ ಕೊರತೆ ಬಾಧಿಸದ ಕಾರಣ ಆಂದ್ರ ಸುಮ್ಮನಿದೆ. ಆದರೆ ಈ ವರ್ಷ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಗಳಿದ್ದು ನೀರಿಗಾಗಿ ಕರ್ನಾಟಕದ ಕಡೆ ಕಣ್ಣಾಯಿಸುವ ಅವಕಾಶಗಳಿವೆ.
ವಿವಿ ಸಾಗರ ಜಲಾಶಯ ಕೋಡಿ ಬೀಳುವ ಮುನ್ನ ಆಂಧ್ರದ ಅಧಿಕಾರಿಗಳ ತಂಡ ಡ್ಯಾಂಗೆ ಭೇಟಿ ನೀಡಿ ಅವಲೋಕಿಸಿದೆ. ಡ್ರೋಣ್ ಸಹಾಯದಿಂದ ನೀರಿನ ಸಂಗ್ರಹವನ್ನು ಶೂಟ್ ಮಾಡಿಕೊಂಡು ಹೋಗಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದ ಸುದ್ದಿ ರಾಜ್ಯವ್ಯಾಪಿ ಪಸರಿಸಿದ್ದು, ಆಂಧ್ರ ಪ್ರದೇಶದ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಮಾರಿಕಣಿವೆಯಲ್ಲಿ ಸಂಗ್ರಹವಾದ 30 ಟಿಎಂಸಿ ನೀರನ್ನು ಬಚ್ಚಿಟ್ಟುಕೊಳ್ಳಲು ಬರುವುದಿಲ್ಲ. ದುಡ್ಡು ಕೊಟ್ಟು ವಿದ್ಯುತ್ ಬಳಸಿ ಭದ್ರಾ ದಿಂದ ವಿವಿ ಸಾಗರಕ್ಕೆ ನೀರನ್ನು ಲಿಫ್ಟ್ ಮಾಡಿ ತುಂಬಿಸಲಾಗಿದೆ.
ಕುಡಿಯುವ ನೀರಿನ ಬೇಡಿಕೆ ಮುಂದಿಟ್ಟುಕೊಂಡು ಆಂದ್ರ ಪ್ರದೇಶ ಸರ್ಕಾರ ಮಾರಿಕಣಿವೆ ನೀರು ಬಿಡುವಂತೆ ಕೇಳಲು ಮುಂದಾಗಬಹುದು. ವಿವಿ ಸಾಗರ ಕೆಳಭಾಗದಲ್ಲಿರುವ ಬೈರನತಿಪ್ಪೆ ಜಲಾಶಯ ಬರಿದಾಗಿದ್ದು ಇಲ್ಲಿಗೆ ನೀರು ಹರಿಸುವಂತೆ ಆಂದ್ರ ಸುಪ್ರೀಂ ಕೊರ್ಟ ಮೆಟ್ಟಿಲೇರಿ ನಿರ್ದೇಶನ ತಂದರೆ ಅನಿವಾರ್ಯವಾಗಿ ಬಿಡಲೇ ಬೇಕಾಗುತ್ತದೆ. ವಿವಿ ಸಾಗರದಲ್ಲಿ ನೀರಿದ್ದು ಅಲ್ಲಿಂದ ಗಾಯತ್ರಿ ಜಲಾಶಯಕ್ಕೆ ಅರ್ಧ ಟಿಎಂಸಿ ನೀರು ಕೊಡಿ ಎಂದು ಸದಾ ಸುದ್ದಿ ಮಾಡುತ್ತಿರುವ ಸಚಿವ ಡಿ.ಸುಧಾಕರ್ ನಡೆ ಆಂದ್ರಕ್ಕೆ ವರವಾಗುವ ಸಾಧ್ಯತೆಗಳೇ ಹೆಚ್ಚಾಗಿದ್ದು ಭವಿಷ್ಯದಲ್ಲಿ ವಿವಿ ಸಾಗರಕ್ಕೆ ಕಂಟಕವಾಗಬಹುದು.