ಸಾರಾಂಶ
ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಗ್ಗೆರೆಯಲ್ಲಿ ಇಂದು ಮಹಾ ರಥೋತ್ಸವ ನಡೆಯಲಿದ್ದು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಾರ್ಯದಲ್ಲಿ ಇಂದು ಮಹಾ ರಥೋತ್ಸವ ನಡೆಯಲಿದ್ದು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ.ಭಕ್ತ ನಂಬಿಯಣ್ಣ ಎಂಬುವರಿಗೆ ನೀಡಿದ ಮಾತಿಗೆ ಕಟ್ಟು ಬಿದ್ದು 12 ವರ್ಷ ತಪಸ್ಸು ಮಾಡಿದ್ದ ಈ ಪುಣ್ಯಭೂಮಿ ತಪೋ ಕ್ಷೇತ್ರ ಕಗ್ಗೆರೆ ಹುತ್ತದಲ್ಲಿ ಶಿವ ಧ್ಯಾನದಲ್ಲಿ ಕುಳಿತಿದ್ದ ಸಿದ್ದಲಿಂಗೇಶ್ವರರನ್ನು ಸಹಸ್ರಾರು ಕೊಡಗಳ ಹಾಲನ್ನು ತಂದು ಹುತ್ತವನ್ನು ಕರಗಿಸಿ ಅವರನ್ನು ಹೊರಗೆ ತಂದ ಅಭಿಜನ್ ಲಗ್ನದಲ್ಲಿ ಮಹಾರಥೋತ್ಸವ 550 ವರ್ಷದಿಂದ ನಡೆಯುತ್ತಿದೆ. ಕರ್ನಾಟಕ ತಮಿಳುನಾಡು ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಲಿದ್ದು ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರು ಮೂಲಭೂತ ಸೌಕರ್ಯ ಸೇರಿದಂತೆ ವಾಹನ ನಿಲ್ದಾಣ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷವಾಗಿ ದಾಸೋಹ ಸೇವಾ ಸಮಿತಿಯಿಂದ ಬರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡುತ್ತಿದ್ದು ಸರ್ಕಾರದ ಯಾವುದೇ ಅನುದಾನ ಪಡೆಯದೆ ಭಕ್ತರು ಭಕ್ತರಿನಿಂದ ಭಕ್ತರಿಗೋಸ್ಕರ ಮಾಡುವ ವಿಶೇಷ ವ್ಯವಸ್ಥೆ ಇಲ್ಲಿದೆ.
ಮಧ್ಯಾಹ್ನ 12 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರರ ಉತ್ಸವದ ವಿಗ್ರಹವನ್ನು ದೇವಾಲಯದಿಂದ ಹೊರತಂದು ಕಲಾತಂಡ ಮತ್ತು ಕಗ್ಗೆರೆ ವೀರಶೈವ ಮಂಡಳಿ ವತಿಯಿಂದ ನಡೆಯುವ ಆರತಿ ಉತ್ಸವದೊಂದಿಗೆ ಮಹಾರಥೋತ್ಸವ ಜರುಗಲಿದೆ. ಜಾತ್ರೆ ನಿಮಿತ್ತ ವಿಶೇಷವಾಗಿ ತಪೋಕ್ಷೇತ್ರ ಕಗ್ಗೆರೆಯಲ್ಲಿ ಹಲಸಿನಕಾಯಿ ಮುದ್ದೆ ವಿಶೇಷ ಊಟ ಸಾಂಪ್ರದಾಯಿಕವಾಗಿ ನಡೆಯಲಿದ್ದು ಸುಮಾರು 40ಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬಿಸಿಲಿನ ಬೇಗೆ ಅಧಿಕಗೊಳ್ಳುತ್ತಿದ್ದು ದೇವಾಲಯದ ವತಿಯಿಂದ ನೀರಿನ ಸರಬರಾಜು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಮಜ್ಜಿಗೆ ಪಾನಕ ವಿತರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.