ಸೇನೆಗೆ ಪ್ರತೀಕಾರ ಪರಮಾಧಿಕಾರ

| Published : Apr 30 2025, 02:03 AM IST

ಸಾರಾಂಶ

26 ಪ್ರವಾಸಿಗರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ನರಮೇಧ ಪ್ರಕರಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಪೂರ್ಣ ಅಧಿಕಾರವನ್ನು ಭಾರತೀಯ ಸೇನೆಗೆ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಯಾರ ಮೇಲೆ, ಯಾವಾಗ, ಹೇಗೆ ದಾಳಿ ಎಂದು ನೀವೇ ನಿರ್ಧರಿಸಿ । ಮೂರೂ ಸೇನಾ ಮುಖ್ಯಸ್ಥರಿಗೆ ಮೋದಿ ಸೂಚನೆ

ಉಗ್ರರಿಗೆ ತಕ್ಕ ಶಿಕ್ಷೆ ಎಂದ ಬೆನ್ನಲ್ಲೆ ಮೋದಿ ದಿಟ್ಟ ನಡೆ । ಪಾಕ್‌ ವಿರುದ್ಧ ಪಹಲ್ಗಾಂ ನರಮೇಧದ ಸೇಡಿಗೆ ಭಾರತ ಸಜ್ಜು?

=

ನವದೆಹಲಿ: 26 ಪ್ರವಾಸಿಗರ ಬಲಿ ಪಡೆದ ಜಮ್ಮು-ಕಾಶ್ಮೀರದ ಪಹಲ್ಗಾಂ ನರಮೇಧ ಪ್ರಕರಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಪೂರ್ಣ ಅಧಿಕಾರವನ್ನು ಭಾರತೀಯ ಸೇನೆಗೆ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾರ ವಿರುದ್ಧ? ಹೇಗೆ? ಯಾವ ರೀತಿ ದಾಳಿ ನಡೆಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಸೇನೆಗೆ ಪೂರ್ಣ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ಪಹಲ್ಗಾಂ ದಾಳಿ ರೂವಾರಿಗಳಿಗೆ ಊಹಿಸಲಾಗದ ರೀತಿಯಲ್ಲಿ ತಕ್ಕ ಶಿಕ್ಷೆ ನೀಡಲಾಗುವುದು’ ಎಂದು ಇತ್ತೀಚೆಗೆ ಮೋದಿ ಗುಡುಗಿದ್ದರು. ಬಳಿಕ, ‘ಭಾರತ ನಮ್ಮ ಮೇಲೆ ದಾಳಿ ನಡೆಸುವುದು ಬಹುತೇಕ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ’ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದರು. ಇದರ ಬೆನ್ನಲ್ಲೇ ಭಾರತ ಸರ್ಕಾರ ಇಂಥದ್ದೊಂದು ಮಹತ್ವದ ದಿಟ್ಟ ಹೆಜ್ಜೆ ಇರಿಸಿದೆ.

ಪೂರ್ಣ ಅಧಿಕಾರ:

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌ ಸೇರಿದಂತೆ ಮೂರು ಸೇನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಭಯೋತ್ಪಾದನೆ ಪೂರ್ಣ ನೆಲಸಮ ಮಾಡುವುದು ಭಾರತದ ಸಂಕಲ್ಪ. ಈ ವಿಷಯದಲ್ಲಿ ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯಗಳ ಬಗ್ಗೆ ಪೂರ್ಣ ವಿಶ್ವಾಸವಿದೆ. ನಮ್ಮ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಅವರಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವಿದೆ’ ಎಂದು ಘೋಷಿಸಿದರು.

ಮತ್ತೊಮ್ಮೆ ಎಚ್ಚರಿಕೆ:

26 ಪ್ರವಾಸಿಗರ ನರಮೇಧಕ್ಕೆ ಕಾರಣವಾಗಿದ್ದ ಭಯೋತ್ಪಾದಕರು ಹಾಗೂ ಅದರ ಹಿಂದಿನ ರೂವಾರಿಗಳಿಗೆ ಊಹಿಸಲಾಗದ ರೀತಿಯಲ್ಲಿ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಇತ್ತೀಚೆಗೆ ಮೋದಿ ಗುಡುಗಿದ್ದರು. ಜೊತೆಗೆ ಭಾನುವಾರ ಪ್ರಸಾರವಾದ ಮನ್‌ ಕೀ ಬಾತ್‌ನಲ್ಲಿ ಕೂಡಾ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು. ಮತ್ತೊಮ್ಮೆ ಹೇಳುತ್ತೇನೆ, ಪಹಲ್ಗಾಂ ಉಗ್ರ ದಾಳಿ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. 26 ಮಂದಿಯನ್ನು ಬಲಿ ಪಡೆದ ಭಯೋತ್ಪಾದಕರು ಮತ್ತು ದಾಳಿ ಹಿಂದಿನ ರೂವಾರಿಗಳಿಗೆ ಕಠಿಣ ಶಿಕ್ಷೆ ಆಗಲಿದೆ. ಈ ದಾಳಿಯ ಚಿತ್ರಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕೊತಕೊತ ಕುದಿಯುತ್ತಿದೆ ಎಂದ ಗುಡುಗಿದ್ದರು.

---

ದಾಳಿ ಭೀತಿಯಿಂದ ಕಾಶ್ಮೀರದ48 ಪ್ರವಾಸಿ ತಾಣಗಳು ಬಂದ್‌

- ಉಗ್ರರ ಮನೆ ನಾಶದ ಸೇಡಿಗೆ ದಾಳಿ ಸಂಚು?- ಪ್ರವಾಸಿಗರ ಮೇಲೆ ದಾಳಿಗೆ ಪ್ಲಾನ್: ಗುಪ್ತದಳ

==ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಯೋತ್ಪಾದಕರು ಮತ್ತೆ ಸ್ಥಳೀಯರಲ್ಲದವರ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಈ ಬೆನ್ನಲ್ಲೇ ಕಾಶ್ಮೀರ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ 87 ಪ್ರವಾಸಿ ತಾಣಗಳ ಪೈಕಿ 48 ತಾಣಗಳನ್ನು ಮುಚ್ಚಿದೆ.

ಪಾಕಿಸ್ತಾನದ ಐಎಸ್‌ಐ, ಪಹಲ್ಗಾಂ ಮಾದರಿಯಲ್ಲಿಯೇ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ದಾಳಿಗೆ ಸಂಚು ಜೊತೆಗೆ ಸಿಐಡಿ ಅಧಿಕಾರಿಗಳು, ಕಾಶ್ಮೀರಿ ಪಂಡಿತರನ್ನುಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿದೆ ಎನ್ನುವ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ.ಪಹಲ್ಗಾಂ ದಾಳಿ ನಂತರ ಭಯೋತ್ಪಾದಕರ ಮನೆಗಳನ್ನು ನಾಶಪಡಿಸಿದ್ದಕ್ಕೆ ಪ್ರತೀಕಾರವಾಗಿ ದೊಡ್ಡ ಮಟ್ಟಿಗೆ ದಾಳಿಗೆ ಯೋಚಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಸರ್ಕಾರ 48 ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧವನ್ನು ವಿಧಿಸಿದೆ.

ಇತ್ತೀಚಿನ ಪಹಲ್ಗಾಂ ದಾಳಿ ಹಾಗೂ 48 ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಸರ್ಕಾರದ ನಿರ್ಧಾರವು ಕಾಶ್ಮೀರ ಪ್ರವಾಸೋದ್ಯಮವನ್ನೇ ನೆಚ್ಚಿದ್ದ ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.

---ಪಹಲ್ಗಾಂ ದಾಳಿಕೋರ ಹಶೀಂ ಮೂಸಾ ಪಾಕ್ ಸೇನಾ ಯೋಧ!- ನರಮೇಧದಲ್ಲಿ ಪಾಕ್‌ ಸೇನೆ, ಐಎಸ್ಐ ಕೈವಾಡ ದೃಢ- ಸೇನೆಯಿಂದಲೇ ಲಷ್ಕರ್‌ಗೆ ಈತನ ನಿಯೋಜನೆ ಶಂಕೆ

---ನವದೆಹಲಿ: ಪಹಲ್ಗಾಂ ದಾಳಿಯಲ್ಲಿ ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ನೇರವಾಗಿ ಭಾಗಿಯಾಗಿರುವುದನ್ನು ಆರಂಭಿಕ ತನಿಖೆ ದೃಢಪಡಿಸಿದೆ. ದಾಳಿಯ ಪ್ರಮುಖ ಸಂಚುಕೋರನನ್ನು ಪಾಕಿಸ್ತಾನಿ ಪ್ರಜೆ ಹಶೀಮ್ ಮೂಸಾ ಎಂದು ಗುರುತಿಸಲಾಗಿದೆ. ಜೊತೆಗೆ, ಈತ ಪಾಕ್‌ ಸೇನೆಯ ವಿಶೇಷ ಪಡೆಯ ಮಾಜಿ ಪ್ಯಾರಾ ಕಮಾಂಡೋ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಉಗ್ರರಿಗೆ ನೆರವು ನೀಡುತ್ತಿದ್ದ ಶಂಕಿತ 15 ಕಾಶ್ಮೀರಿ ಭೂಗತ ಕಾರ್ಯಕರ್ತರ ವಿಚಾರಣೆ ವೇಳೆ ಮೂಸಾನ ಸೇನಾ ಹಿನ್ನೆಲೆ ಬಯಲಾಗಿದೆ. ಆತ ಈಗ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಕೆಲಸ ಮಾಡುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರು ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಯಿಂದ ಆತನನ್ನು ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.‘ವಿಶೇಷ ಸೇವಾ ತಂಡ (ಎಸ್‌ಎಸ್‌ಜಿ) ದಂತಹ ಪಾಕಿಸ್ತಾನದ ವಿಶೇಷ ಪಡೆಗಳು ಆತನನ್ನು ಎಲ್‌ಇಟಿಗೆ ನೀಡಿರಬಹುದು. ಎಸ್‌ಎಸ್‌ಜಿಯ ಪ್ಯಾರಾ-ಕಮಾಂಡೋಗಳು ಅಸಾಂಪ್ರದಾಯಿಕ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣತರಾಗಿರುತ್ತಾರೆ. ದೈಹಿಕ-ಮಾನಸಿಕ ದಾರ್ಢ್ಯ, ಕಾರ್ಯತಂತ್ರದ ಯೋಜನೆ, ಸುಧಾರಿತ ಶಸ್ತ್ರಾಸ್ತ್ರ ನಿರ್ವಹಣೆ, ಯುದ್ಧ ಕೌಶಲಗಳ ಕುರಿತು ಅವರಿಗೆ ತೀವ್ರತರವಾದ ತರಬೇತಿ ನೀಡಲಾಗಿರುತ್ತದೆ’ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

---

ಪಾಕ್‌ಗೆ ಭಾರತ ವಾಯುಸೀಮೆ ಬಂದ್?

ನವದೆಹಲಿ: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ, ಪಾಕ್‌ ವಿಮಾನಗಳಿಗೆ ತನ್ನ ವಾಯುಸೀಮೆ ಮತ್ತು ಪಾಕ್‌ ಹಡಗಿಗೆ ತನ್ನ ಬಂದರು ಪ್ರವೇಶ ನಿಷೇಧಿಸುವ ಕುರಿತು ಭಾರತ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಹೀಗಾದರೆ ಮ್ಯಾನ್ಮಾರ್, ಕಾಂಬೋಡಿಯಾ, ಮಲೇಷ್ಯಾ ಮೊದಲಾದ ದೇಶಗಳಿಗೆ ಪಾಕ್‌ ವಿಮಾನ ಸುತ್ತಿಬಳಸಿ ಹೋಗಬೇಕಾಗುತ್ತದೆ.--

ಪ್ರವೇಶ ದ್ವಾರ ಮುಚ್ಚಿ ಉಗ್ರರ ನರಮೇಧಶ್ರೀನಗರ: ಪಹಲ್ಗಾಂನ ಬೈಸರನ್‌ ಕಣಿವೆಗೆ ನುಗ್ಗಿ ಕದ್ದು ಕುಳಿತಿದ್ದ ಉಗ್ರರು, ಯಾರಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಪ್ರವೇಶ ದ್ವಾರ ಮುಚ್ಚಿ 26 ಜನರನ್ನು ಹತ್ಯೆ ಮಾಡಿದ್ದಾರೆ ಎಂಬ ವಿಷಯ ಎನ್‌ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ. . ಘಟನಾ ಸ್ಥಳದಲ್ಲಿನ ಸಾಕ್ಷ್ಯ, ಮೃತರ ಕುಟುಂಬ ಹೇಳಿಕೆ ಆಧರಿಸಿ ತನಿಖಾ ಸಂಸ್ಥೆ ಈ ವಿಷಯ ಕಲೆಹಾಕಿದೆ.