80 ಡಾಲರ್‌ಗೆ ಕುಸಿದ ಕಚ್ಚಾತೈಲ: ಇಂಧನ ದರ ಕಡಿತ ಸನ್ನಿಹಿತ?

| Published : Jan 25 2024, 02:00 AM IST

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಭಾರೀ ಮಟ್ಟದಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಶೀಘ್ರ ದರ ಕಡಿತ ಘೋಷಣೆ ಸಾಧ್ಯತೆಯಅಗಲಿದೆ ಎನ್ನಲಾಗಿದೆ.

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 80 ಡಾಲರ್‌ (6650 ರು.) ಗಿಂತ ಕೆಳಗೆ ಇಳಿದಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಸಬಹುದು ಎಂಬ ವರದಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ.

ಜಾಗತಿಕ ಬೆಳವಣಿಗೆಗಳ ಪರಿಣಾಮ ಕಚ್ಚಾತೈಲ ಬೇಡಿಕೆ ಇಳಿದಿದೆ. ಪರಿಣಾಮ ದರವೂ ಕುಸಿತ ಕಂಡಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳೀಗ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ 11 ರು. ಮತ್ತು ಡೀಸೆಲ್‌ ಮೇಲೆ 6 ರು.ನಷ್ಟು ಭರ್ಜರಿ ಲಾಭ ಪಡೆಯುತ್ತಿವೆ. ಕಳೆದ ಹಲವು ತಿಂಗಳಿನಿಂದಲೂ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ತಮ್ಮ ಬೊಕ್ಕಸವನ್ನು ಭರ್ಜರಿಯಾಗಿ ತುಂಬಿಸಿಕೊಂಡಿವೆ.

ಇನ್ನೊಂದೆಡೆ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸುವ ಮೂಲಕ ಜನಸಾಮಾನ್ಯರ ಓಲೈಕೆಗೆ ಮುಂದಾಗಲಿದೆ ಎಂದು ವರದಿಗಳಿವೆ. ಜೊತೆಗೆ ದರ ಕಡಿತ ಹಣದುಬ್ಬರ ಇಳಿಕೆಗೂ ಕಾರಣವಾಗಲಿದೆ. ಹೀಗಾಗಿ ಶೀಘ್ರವೇ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರ ಇಳಿಕೆಗೆ ಮುಂದಾಗಬಹುದು ಎಂದು ವರದಿಗಳು ತಿಳಿಸಿವೆ.