ಸಾರಾಂಶ
ಇಂಫಾಲ್ : ಮೈತೇಯಿ ಮತ್ತು ಕುಕಿ ಜನಾಂಗಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಣಿಪುರದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ಇನ್ನೂ ಮುಂದುವರೆದಿದೆ. ಭಾನುವಾರ ತಡರಾತ್ರಿ ಜಿರಿಬಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಸಂಘರ್ಷದಲ್ಲಿ ಗುಂಡೇಟಿಗೆ ಒಬ್ಬ ನಾಗರಿಕ ಬಲಿಯಾಗಿದ್ದಾನೆ. ಗುಂಡು ಹಾರಿಸಿರುವುದು ಯಾರು ಎಂಬುದು ತಿಳಿದುಬಂದಿಲ್ಲ.
ಈಗಾಗಲೇ ಮುಖ್ಯಮಂತ್ರಿ, ಕೆಲ ಮಂತ್ರಿಗಳು ಹಾಗೂ ಶಾಸಕರ ಮನೆ ಸೇರಿ 13 ಜನಪ್ರತಿನಿಧಿಗಳ ಮನೆಗಳ ಮೇಲೆ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ. ಭಾನುವಾರ ರಾತ್ರಿ ಕೂಡ ಜಿರಿಬಾಂ ಜಿಲ್ಲೆಯ ಸ್ವತಂತ್ರ ಶಾಸಕನ ಮನೆಯ ಮೇಲೆ ದಾಳಿ ನಡೆದಿದೆ. ಗಲಭೆಪೀಡಿತ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆದಿದ್ದು, 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತವನ್ನು ಇನ್ನೂ 2 ದಿನ ವಿಸ್ತರಿಸಲಾಗಿದೆ.
ಎನ್ಐಎ ಎಫ್ಐಆರ್:
ಇತ್ತೀಚಿನ ಗಲಭೆ ಹಾಗೂ ಹತ್ಯೆಯ ಘಟನೆಗಳ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದೆ.
ಅಮಿತ್ ಶಾ, ಬೀರೇನ್ ಸಿಂಗ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ನವದೆಹಲಿ : ಮಣಿಪುರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕು ಎಂದೂ ಒತ್ತಾಯಿಸಿದೆ.
ಸೋಮವಾರ ಮಣಿಪುರದ ಕಾಂಗ್ರೆಸ್ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಮಣಿಪುರದಲ್ಲಿ ಡಬಲ್ ಎಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಒಂದೂವರೆ ವರ್ಷದಿಂದ ಈಶಾನ್ಯ ರಾಜ್ಯ ಹೊತ್ತಿ ಉರಿಯುತ್ತಿದೆ. ಪ್ರಧಾನಿ ನಾನಾ ದೇಶ ಸುತ್ತಾಡಿ ಪ್ರವಚನಗಳನ್ನು ನೀಡುತ್ತಾರಾದರೂ, ಮಣಿಪುರಕ್ಕೆ ಹೋಗಲು ಅವರಿಗೆ ಸಮಯವಿಲ್ಲ. ಬಿಡುವು ಮಾಡಿಕೊಂಡು ಅವರು ಮಣಿಪುರಕ್ಕೆ ತೆರಳಿ ಅಲ್ಲಿನ ಜನರು, ರಾಜಕೀಯ ಪಕ್ಷಗಳು ಹಾಗೂ ನಿರಾಶ್ರಿತರ ಶಿಬಿರಗಳಲ್ಲಿ ಇರುವವರನ್ನು ಭೇಟಿ ಮಾಡಬೇಕು. ಸಂಸತ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದು ಮಣಿಪುರದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.