ಸಾರಾಂಶ
ಕೋಲ್ಕತಾ/ಮುಂಬೈ: ಮಹಾರಾಷ್ಟ್ರದಲ್ಲಿ ಪುಣೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗುತ್ತಿರುವ ಗುಯಿಲಿನ್ ಬರ್ರೆ, ಇದೀಗ ಬಂಗಾಳದಲ್ಲೂ ಕಾಣಿಸಿಕೊಂಡಿದ್ದು ಇಬ್ಬರನ್ನು ಬಲಿಪಡೆದಿದೆ. ಈ ವ್ಯಾಧಿಗೆ ಕೋಲ್ಕತಾದಲ್ಲಿ 10 ವರ್ಷದ ಬಾಲಕ ಮತ್ತು 48 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಆತಂಕ ಬೇಡ:
ಈ ನಡುವೆ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯು ಜನರಿಗೆ ಆತಂಕಕ್ಕೆ ಗುರಿಯಾಗುವುದು ಬೇಡ ಎಂದಿದೆ. ಸೋಂಕು ಹೊಸದೇನಲ್ಲ. ಕೇವಲ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳಲಿದ್ದು, ಜಾಗೃತರಾಗಿರುವಂತೆ ಸೂಚಿಸಿದೆ.
ಇತ್ತ ಮಹಾರಾಷ್ಟ್ರದಲ್ಲಿ ಜಿಬಿಎಸ್ ಪ್ರಕರಣಗಳ ಸಂಖ್ಯೆಯು 110ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಪುಣೆಯೊಂದರಲ್ಲಿಯೇ 88 ಕೇಸುಗಳು ವರದಿಯಾಗಿವೆ. 110 ಜನರಲ್ಲಿ 73 ಪುರುಷರು 37 ಮಹಿಳೆಯರು ಸೋಂಕಿಗೆ ಗುರಿಯಾಗಿದ್ದಾರೆ.
ಸೋಂಕಿನ ಲಕ್ಷಣವೇನು:
ಮೊದಲಿಗೆ ಕಾಲುಗಳು ಬಲಹೀನವಾಗಲಿದ್ದು, ಇದು ಮುಂದುವರಿದು ಸ್ವಾಧೀನ ಕಳೆದುಕೊಳ್ಳುತ್ತದೆ. ಹಾಗೆ ಬಲಹೀನವು ದೇಹದ ಮೇಲ್ಭಾಗಕ್ಕೂ ತೆರಳಿ ದೇಹವೆಲ್ಲಾ ನಿಶಕ್ತಿ ಆವರಿಸಿ, ನಿತ್ರಾಣಗೊಳಿಸುತ್ತದೆ. ಇನ್ನು ಕೆಲವು ಸನ್ನಿವೇಶದಲ್ಲಿ ಸೋಂಕು ಮುಖಕ್ಕೂ ಆವರಿಸಲಿದ್ದು, ಮಾತಾಡಲು ಆಗದೆ, ಆಹಾರ ಸೇವಿಸಲು, ಅಗಿಯಲು, ನುಂಗಲು ಕಷ್ಟವಾಗಲಿದೆ. ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇದು ಮುಂದುವರಿದು ಉಸಿರಾಟದ ತೊಂದರೆಯೂ ಆಗುತ್ತದೆ.