ಅಮೆರಿಕದಲ್ಲಿ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ನಡುವೆಯೇ ಹಿಂದೂಫೋಬಿಯಾ ವಿರುದ್ಧ ಮಸೂದೆ

| N/A | Published : Apr 13 2025, 02:07 AM IST / Updated: Apr 13 2025, 06:12 AM IST

ಸಾರಾಂಶ

ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ನಡುವೆಯೇ ಹಿಂದೂಫೋಬಿಯಾ (ಹಿಂದೂ ವಿರೋಧಿ ಭಾವನೆ) ಮತ್ತು ಹಿಂದೂ ಧರ್ಮದ ಮೇಲಿನ ಅಸಹಿಷ್ಣುತೆಯ ವಿರುದ್ಧ ಇದೇ ಮೊದಲ ಬಾರಿಗೆ ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ವಿಧೇಯಕವೊಂದನ್ನು ಮಂಡಿಸಲಾಗಿದೆ.

ವಾಷಿಂಗ್ಟನ್‌: ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ನಡುವೆಯೇ ಹಿಂದೂಫೋಬಿಯಾ (ಹಿಂದೂ ವಿರೋಧಿ ಭಾವನೆ) ಮತ್ತು ಹಿಂದೂ ಧರ್ಮದ ಮೇಲಿನ ಅಸಹಿಷ್ಣುತೆಯ ವಿರುದ್ಧ ಇದೇ ಮೊದಲ ಬಾರಿಗೆ ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ವಿಧೇಯಕವೊಂದನ್ನು ಮಂಡಿಸಲಾಗಿದೆ. ಈ ಮೂಲಕ ಹಿಂದೂಫೋಬಿಯಾ ವಿರುದ್ಧದ ವಿಧೇಯಕ ಮಂಡಿಸಿದ ಅಮೆರಿಕದ ಮೊದಲ ರಾಜ್ಯ ಜಾರ್ಜಿಯಾ ಆಗಲಿದೆ.

ಒಂದು ವೇಳೆ ವಿಧೇಯಕ ಕಾನೂನಾಗಿ ಪರಿವರ್ತನೆಯಾದರೆ ಅಮೆರಿಕದಲ್ಲಿರುವ ಹಿಂದೂಗಳ ವಿರುದ್ಧದ ಧಾರ್ಮಿಕ ಆಧಾರದ ದೌರ್ಜನ್ಯಗಳಿಗೆ ಕಾನೂನು ಮೂಲಕ ಕಡಿವಾಣ ಬೀಳಲಿದೆ.

ರಿಪಬ್ಲಿಕನ್‌ ಸೆನೆಟರ್‌ಗಳಾದ ಶಾನ್‌ ಸ್ಟಿಲ್‌ ಮತ್ತು ಕ್ಲಿಂಟ್‌ ಡಿಕ್ಸನ್‌ ಅವರು ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ಗಳಾದ ಜೇಸನ್‌ ಸ್ಟೀವ್ಸ್‌ ಮತ್ತು ಇಮ್ಯಾನ್ಯುವಲ್‌ ಡಿ. ಡೋನ್ಸ್‌ ಅವರು ಜಂಟಿಯಾಗಿ ಈ ವಿಧೇಯಕವನ್ನು ಬೆಂಬಲಿಸಿದ್ದಾರೆ.

ಸೆನೆಟ್‌ ಬಿಲ್‌ 375 ಹೆಸರಿನ ವಿಧೇಯಕವು ಜಾರ್ಜಿಯಾ ಕೋಡ್‌ಗೆ ತಿದ್ದುಪಡಿ ಪ್ರಸ್ತಾಪಿಸಿದ್ದು, ಇದು ಹಿಂದೂಫೋಬಿಯಾವನ್ನು ಹಿಂದೂ ಧರ್ಮದ ಕುರಿತ ಹಗೆತನ, ವಿನಾಶಕ ಮತ್ತು ಅವಹೇಳನಕಾರಿ ನಡತೆ ಮತ್ತು ವರ್ತನೆ ಎಂದು ವ್ಯಾಖ್ಯಾನಿಸುತ್ತದೆ. ಹಾಲಿ ಇರುವ ತಾರತಮ್ಯ ವಿರೋಧಿ ಕಾನೂನಿಗೆ ಹಿಂದೂಫೋಬಿಯಾವನ್ನೂ ಸೇರಿಸಲು ಈ ತಿದ್ದುಪಡಿ ಅವಕಾಶ ಮಾಡಿಕೊಡುತ್ತದೆ. ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟವು ಹಿಂದೂಫೋಬಿಯಾ ಬಿಲ್‌ ಅನ್ನು ಸ್ವಾಗತಿಸಿದೆ.

ಈ ಹಿಂದೆ ಜಾರ್ಜಿಯಾವು ಹಿಂದೂಫೋಬಿಯಾ ಮತ್ತು ಹಿಂದೂ ಧರ್ಮ ವಿರೋಧಿ ನಡೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿತ್ತು.