ಜಾಲತಾಣದಲ್ಲಿ ಲೈಕ್‌ ಗಿಟ್ಟಿಸಿಕೊಳ್ಳಲು ಟವೆಲ್ ಸುತ್ತಿಕೊಂಡು ಇಂಡಿಯಾ ಗೇಟ್‌ ಬಳಿ ಯುವತಿ ಡಾನ್ಸ್!

| Published : Nov 21 2024, 01:00 AM IST / Updated: Nov 21 2024, 04:29 AM IST

ಸಾರಾಂಶ

ಜಾಲತಾಣದಲ್ಲಿ ಲೈಕ್‌ ಗಿಟ್ಟಿಸಿಕೊಳ್ಳಲು ಕೋಲ್ಕತಾದ ಮಾಡೆಲ್ ಒಬ್ಬಳು, ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್‌ ಮುಂದೆ ಬಿಳಿ ಟವೆಲ್‌ ಸುತ್ತಿಕೊಂಡು ಡಾನ್ಸ್‌ ಮಾಡಿದ್ದಾಳೆ.

ನವದೆಹಲಿ: ಜಾಲತಾಣದಲ್ಲಿ ಲೈಕ್‌ ಗಿಟ್ಟಿಸಿಕೊಳ್ಳಲು ಕೋಲ್ಕತಾದ ಮಾಡೆಲ್ ಒಬ್ಬಳು, ದೆಹಲಿಯ ಪ್ರಸಿದ್ಧ ಇಂಡಿಯಾ ಗೇಟ್‌ ಮುಂದೆ ಬಿಳಿ ಟವೆಲ್‌ ಸುತ್ತಿಕೊಂಡು ಡಾನ್ಸ್‌ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಇಂಡಿಯಾ ಗೇಟ್‌ನಂಥ ಸ್ಥಳದಲ್ಲಿ ಹೀಗೆ ಮಾಡಿದ್ದಕ್ಕೆ ನೆಟ್ಟಿಗರು ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.2017ರ ಮಿಸ್‌ ಕೋಲ್ಕತಾ ವಿಜೇತೆ ಸನ್ನತಿ ಮಿತ್ರಾ, ಇಂಡಿಯಾ ಗೇಟ್‌ ಮುಂದೆ ಟವೆಲ್‌ ಸುತ್ತಿಕೊಂಡು ವಿಡಿಯೋ ಮಾಡಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡವಳು. ಅಂತಾರಾಷ್ಟ್ರೀಯ ಪುರುಷರ ದಿನದಂದು ಈ ವಿಡಿಯೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಬರೀ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುತ್ತಾ ಸನ್ನತಿ ಬಾಲಿವುಡ್‌ನ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ಯ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡ 2 ಗಂಟೆಯಲ್ಲೇ 2 ಲಕ್ಷ ವೀಕ್ಷಣೆ ಕಂಡಿದೆ.

ಇದಕ್ಕೂ ಮುನ್ನ ಸನ್ನತಿ, ತನ್ನಿಬ್ಬರು ಸ್ನೇಹಿತರೊಂದಿಗೆ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಎದೆಸೀಳು ಕಾಣುವ ಅಸಭ್ಯ ಬಟ್ಟೆ ಧರಿಸಿ ವಿವಾದ ಸೃಷ್ಟಿಸಿದ್ದಳು.

ವಾಹನಗಳ ವೇಗ ಅಳೆವ ಸ್ಪೀಡ್‌ ಗನ್‌ ಪರಿಶೀಲನೆ, ಅನುಮೋದನೆ ಕಡ್ಡಾಯ

ನವದೆಹಲಿ: ರಸ್ತೆಗಳಲ್ಲಿ ವಾಹನ ಸವಾರರ ವಾಹನದ ವೇಗದ ಮಿತಿ ಅಳೆಯಲು ಸಂಚಾರಿ ಪೊಲೀಸರು ಬಳಸುವ ‘ಮೈಕ್ರೋವೇವ್‌ ಡೋಪ್ಲರ್‌ ರಾಡಾರ್‌’ (ಸ್ಪೀಡ್ ಗನ್‌) ಉಪಕರಣವನ್ನು ಇನ್ನು ಮುಂದೆ ಬಳಸುವ ಮೊದಲು ಅದನ್ನು ನಿಖರತೆಯ ಪರೀಕ್ಷೆಗೆ ಒಳಪಡಿಸುವುದನ್ನು ಕಡ್ಡಾಯಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ರಸ್ತೆ ಸುರಕ್ಷತೆಯ ಸುಧಾರಣೆ ಮತ್ತು ಕಾನೂನು ಕ್ರಮಗಳನ್ನು ಇನ್ನಷ್ಟು ನಿಖರಗೊಳಿಸುವ ಉದ್ದೇಶದಿಂದ ಈ ಬದಲಾವಣೆಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯಡಿ ಬರುವ ಮಾಪನಶಾಸ್ತ್ರ ಇಲಾಖೆ ನಿರ್ಧರಿಸಿದೆ.

ಈ ನಿರ್ಧಾರದ ಅನ್ವಯ, ಇನ್ನು ಮುಂದೆ ‘ಮೈಕ್ರೋವೇವ್‌ ಡೋಪ್ಲರ್‌ ರಾಡಾರ್‌’ ಸೇರಿದಂತೆ ಎಲ್ಲಾ ರೀತಿಯ ವೇಗ ಅಳೆಯುವ ಉಪಕರಣಗಳನ್ನು ಬಳಕೆಗೆ ಮೊದಲು ಪರಿಶೀಲನೆಗೆ ಒಳಪಡುವುದು ಮತ್ತು ಖಚಿತತೆಯ ಅಧಿಕೃತ ಮುದ್ರೆ ಪಡೆಯುವುದು ಕಡ್ಡಾಯವಾಗಲಿದೆ.

ಮಣಿಪುರ: 7 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ ಇನ್ನೂ 3 ದಿನ ವಿಸ್ತರಣೆ

ಇಂಫಾಲ್‌: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದ 7 ಜಿಲ್ಲೆಗಳಲ್ಲಿ ಹೇರಲಾಗಿದ್ದ ಇಂಟರ್‌ನೆಟ್‌ ಸ್ಥಗಿತವನ್ನು ಸರ್ಕಾರ ಇನ್ನೂ 3 ದಿನ ವಿಸ್ತರಿಸಿ ಆದೇಶ ಹೊರಡಿಸಿದೆ.‘ಪ್ರಸ್ತುತ ರಾಜ್ಯದ ಪರಿಸ್ಥಿತಿಯನ್ನು ಪರಿಶಿಲಿಸಿ ಇಂಟರ್‌ನೆಟ್‌ ಸೇವೆ ಸ್ಥಗಿತ ಮುಂದುವರೆಸುವ ನಿರ್ಣಯ ಕೈಗೊಳ್ಳಲಾಗಿದ್ದು, ಇದು ರಾಜಧಾನಿ ಇಂಫಾಲ್‌ ಸೇರಿ 7 ಜಿಲ್ಲೆಗಳಲ್ಲಿ ಜಾರಿಯಾಗಲಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಾದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವಿಚಾರಗಳಿಂದಾಗಿ ಕಾನೂನು ಹದಗೆಡುವುದನ್ನು ತಡೆಯುವ ನಿಟ್ಟಿನಲ್ಲಿ ನ.16ರಿಂದ 2 ದಿನ ಇಂಟರ್‌ನೆಟ್‌ ಸೇವೆಗಳನ್ನು ಅಮಾನತುಗೊಳಿಸಲಾಗಿತ್ತು. ಇದರಿಂದ ಜನರು, ಆರೋಗ್ಯ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಮಸ್ಯೆಯಾಗಿದ್ದರಿಂದ ಮಂಗಳವಾರ ಬ್ರಾಡ್‌ಬ್ಯಾಂಡ್‌ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು.

ಮಕ್ಕಳಿಗೆ ಮಂಕಿಪಾಕ್ಸ್ ಲಸಿಕೆ: ಡಬ್ಲುಎಚ್‌ಒ ಅಸ್ತು

ಜಿನಿವಾ: ಕಾಂಗೋ ಮತ್ತು ಆಫ್ರಿಕಾದ ಇತರೆಡೆ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿರುವ ಕಾರಣ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಕ್ಕಳಿಗೆ ಮೊದಲ ಮಂಕಿಪಾಕ್ಸ್‌ ಲಸಿಕೆಗೆ ಅನುಮತಿ ನೀಡಿದೆ.ಬುಧವಾರ ಹೇಳಿಕೆ ನೀಡಿರುವ ಡಬ್ಲುಎಚ್ಒ, ‘ಜಪಾನಿನ ಕಂಪನಿಯ ಕೆಎಂ ಬಯೋಲಾಜಿಕ್ಸ್ ಕಂಡು ಹಿಡಿದ ಮಂಕಿಪಾಕ್ಸ್ ಲಸಿಕೆಯನ್ನು 1 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಒಂದು ಡೋಸ್‌ನಲ್ಲಿ ನೀಡಲು ಅನುಮೋದಿಸಲಾಗಿದೆ’ ಎಂದಿದೆ.ಈ ವರ್ಷದ ಆರಂಭದಲ್ಲಿ ಪೂರ್ವ ಕಾಂಗೋದಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೊಸ ರೂಪದ ಮಂಕಿಪಾಕ್ಸ್‌ನಿಂದ ವಯಸ್ಕರಿಗಿಂತ ಮಕ್ಕಳು ಸಾಯುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿತ್ತು. ಇಲ್ಲಿಯವರೆಗೆ ಆಫ್ರಿಕಾದಲ್ಲಿ 46000 ಜನರಿಗೆ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು, 1081 ಮಂದಿ ಸಾವನ್ನಪ್ಪಿದ್ದಾರೆ.

ಗಲಭೆ ಪೀಡಿತ ಪ್ರದೇಶಕ್ಕೆ ಹೊರಟ ಕೇಂದ್ರ ಸಚಿವನ ಬಂಧನ

ಕೋಲ್ಕತಾ: ಸಂಘರ್ಷ ಪೀಡಿತ ಪ್ರದೇಶವೊಂದಕ್ಕೆ ತೆರಳುತ್ತಿದ್ದ ವೇಳೆ ಕೇಂದ್ರ ಸಚಿವ ಮತ್ತು ಪ. ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ರನ್ನು ನಾದಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ತಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್‌ ಅಧಿಕಾರಿ, ‘ನಿರ್ಬಂಧ ಹೇರಲಾಗಿದ್ದ ಮುರ್ಶಿದಾಬಾದ್‌ ಸಮೀಪದ ಬೆಲ್ದಂಗಾ ಪ್ರದೇಶಕ್ಕೆ ತೆರಳುತ್ತಿದ್ದ ಕಾರಣ ಮಜುಂದಾರ್‌ರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಅಡಿ ಬಂಧಿಸಲಾಗಿದೆ’ ಎಂದರು.

ಬೆಲ್ದಂಗಾದಲ್ಲಿ ಕಾರ್ತಿಕ ಪೂಜೆಗಾಗಿ ನಿಲ್ಲಿಸಲಾಗಿದ್ದ ತಾತ್ಕಾಲಿಕ ಗೇಟ್‌ ಮೇಲೆ ಪ್ರದರ್ಶಿಸಲಾಗಿದ್ದ ಆಕ್ಷೇಪಾರ್ಹ ಸಂದೇಶದಿಂದಾಗಿ ಶನಿವಾರ ರಾತ್ರಿ 2 ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದರು. ಬಿಜೆಪಿ ನಾಯಕರ ಭೇಟಿಯಿಂದ ಉದ್ವಿಗ್ನತೆ ಹೆಚ್ಚುವ ಸಾಧ್ಯತೆಯಿದ್ದ ಕಾರಣ ಈ ಪ್ರದೇಶ ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಜುಂದಾರ್‌ರನ್ನೂ ತಡೆಯಲಾಗಿತ್ತು.ಬಂಧನದ ನಂತರ ಪ್ರತಿಕ್ರಿಯಿಸಿರುವ ಮಜುಂದಾರ್‌, ‘ಬೆಲ್ದಂಗಾದಿಂದ 70 ಕಿಮೀ ದೂರದಲ್ಲೇ ನನ್ನನ್ನು ತಡೆಯಲಾಯಿತು. ಜಿಲ್ಲಾಧಿಕಾರಿಗಳ ಅಥವಾ ಪೊಲೀಸ್‌ ವರಿಷ್ಠಾಧಿಕಾರಿಯ ಕಚೇರಿಯ ವರೆಗೆ ನಮ್ಮೊಂದಿಗೆ ಬೆಂಗಾವಲಾಗಿ ಬರುವಂತೆ ಕೇಳಿಕೊಂಡರೂ ಒಪ್ಪದೆ ಬಂಧಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಫೆ.15ರಿಂದ ಸಿಬಿ​ಎ​ಸ್‌ಇ 10, 12ನೇ ಕ್ಲಾಸ್‌ ಪರೀ​ಕ್ಷೆ

ನವ​ದೆ​ಹ​ಲಿ: ಸಿಬಿ​ಎ​ಸ್‌ಇ 10, 12ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ 2025ರ ಫೆ.15ರಿಂದ ಆರಂಭ ಆಗ​ಲಿವೆ. 10ನೇ ಕ್ಲಾಸ್‌ ಪರೀಕ್ಷೆ ಮಾ.18ಕ್ಕೆ, 12ನೇ ಕ್ಲಾಸ್‌ ಪರೀಕ್ಷೆ ಏ.4ಕ್ಕೆ ಮುಗಿ​ಲಿವೆ ಎಂದು ಮಂಡ​ಳಿಯ ಪ್ರಕ​ಟಣೆ ತಿಳಿ​ಸಿ​ದೆ.