ಸಾರಾಂಶ
ಕಾಠ್ಮಂಡು: ದೈಹಿಕ ನ್ಯೂನ್ಯತೆಗಳು ಸಾಧಿಸಬೇಕು ಎನ್ನುವ ಇಚ್ಛಾ ಶಕ್ತಿ ಹೊಂದಿರುವವರ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವ ಮಾತನ್ನು ಇಂತಹವರನ್ನೇ ನೋಡಿ ಹೇಳುವುದು ಅನಿಸುತ್ತದೆ.
ಹೌದು ಮೂರು ವಿಧದ ಅಂಗವೈಕಲ್ಯವಿದ್ದರೂ ಗೋವಾ ಮೂಲದ 30 ವರ್ಷದ ತಿಂಕೇಶ್ ಕೌಶಿಕ್ ಎನ್ನುವ ವ್ಯಕ್ತಿ ಸಮುದ್ರ ಮಟ್ಟದಿಂದ 17,598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತುದಿಯನ್ನು ತಲುಪಿದ್ದಾರೆ.
ಈ ಸಾಧನೆ ಮಾಡಿದ ವಿಶ್ವದ ಮೊದಲ ಟ್ರಿಪಲ್ ಅಂಗವಿಕ ವ್ಯಕ್ತಿ ಎನಿಸಿಕೊಂಡಿದ್ದಾರೆ.ಕೌಶಿಕ್ ಮೂರು ವಿಧದ ದೈಹಿಕ ನ್ಯೂನ್ಯತೆಗಳನ್ನು ಹೊಂದಿದ್ದಾರೆ. 9 ವರ್ಷದವರಿದ್ದಾಗ ಹರಿಯಾಣದಲ್ಲಿ ನಡೆದ ವಿದ್ಯುತ್ ಅಪಘಾತವೊಂದರಲ್ಲಿ ತನ್ನ ಕಾಲು, ಕೈ ಮತ್ತು ಮಂಡಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ಕೃತಕ ಅಂಗಗಳನ್ನು ಬಳಸುತ್ತಿದ್ದಾರೆ. ಸದ್ಯ ಗೋವಾದಲ್ಲಿ ಫಿಟ್ನೆಸ್ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ಫಿಟ್ನೆಸ್ ಕೋಚ್ ಆಗಿದ್ದ ಕಾರಣ ಮೌಂಟ್ ಎವರೆಸ್ಟ್ ಟ್ರೆಕ್ಕಿಂಗ್ ಸುಲಭವಾಗಬಹುದು ಎಂದು ಕೌಶಿಕ್ ಆರಂಭದಲ್ಲಿ ಭಾವಿಸಿದ್ದರು. ಆದರೆ ಕೃತಕ ಅಂಗಗಳನ್ನು ಬಳಸಿದ ಕಾರಣ ಹಾದಿ ಬಹಳ ಕಷ್ಟವಾಗಿತ್ತು. ಅದನ್ನೆಲ್ಲ ದಾಟಿ ಈ ಸಾಧನೆ ಮಾಡಿದ್ದಾರೆ. ‘ದೈಹಿಕ ನ್ಯೂನ್ಯತೆಗಳನ್ನೂ ಮೀರಿ ತಾನು ಈ ಸಾಧನೆಯನ್ನು ಮಾಡುವುದಕ್ಕೆ ತನ್ನ ಮನಸ್ಸಿನ ದೃಢತೆಯೇ ಕಾರಣ’ ಎನ್ನುತ್ತಾರೆ ಕೌಶಿಕ್.