ಆದಿ-ನಾದಿರ್‌ಗೆ ಕೈಗಾರಿಕೆ, ಜಮ್ಷೆಡ್‌-ಸ್ಮಿತಾಗೆ ಭೂಮಿ ಹಂಚಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಸುಗಮವಾಗಿ ತಮ್ಮ ಪಾಲಿಗೆ ಬಂದ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವುದಾಗಿ ಗೋದ್ರೆಜ್‌ ಕುಟುಂಬ ತಿಳಿಸಿದೆ.

ನವದೆಹಲಿ: 125 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬಹು ಉದ್ಯಮಗಳ ಸಂಸ್ಥೆ ಗೋದ್ರೆಜ್‌ ತಮ್ಮ ಕುಟುಂಬದ ಸದಸ್ಯರ ನಡುವೆ ಇಬ್ಭಾಗವಾಗಿದೆ. ಗೋದ್ರೆಜ್‌ ಇಂಡಸ್ಟ್ರೀಸ್‌ನ ಐದು ಕೈಗಾರಿಕೆಗಳು ಆದಿ ಮತ್ತು ನಾದಿರ್‌ಗೆ ಹಂಚಿಕೆಯಾಗಿದ್ದರೆ, ಗೋದ್ರೆಜ್‌ ಮತ್ತು ಬಾಯ್ಸ್‌ ಜಮ್ಷೆಡ್‌ ಮತ್ತು ಸ್ಮಿತಾ ಪಾಲಾಗಿದೆ. ಇದರ ಜೊತೆಗೆ ಕಂಪನಿಯ ಒಡೆತನದಲ್ಲಿರುವ 3400 ಎಕರೆ ಭೂಮಿ ಕೂಡಾ ಉಭಯ ಪಂಗಡಗಳ ನಡುವೆ ಹಂಚಿಕೆಯಾಗಲಿದೆ.

ಈ ಬದಲಾವಣೆ ಬಳಿಕ ಗೋದ್ರೆಜ್‌ ಇಂಡಸ್ಟ್ರೀಸ್‌ಗೆ ನಾದಿರ್‌ ಗೋದ್ರೆಜ್‌ ಅಧ್ಯಕ್ಷರಾಗಲಿದ್ದು, ಆದಿ ಗೋದ್ರೆಜ್‌ ಪುತ್ರ ಪಿರೋಜ್‌ಶಾ ಉಪಾಧ್ಯಕ್ಷರಾಗಲಿದ್ದಾರೆ. 2026ರಲ್ಲಿ ಫಿರೋಜ್‌ಶಾ ಅವರು ಗೋದ್ರೆಜ್‌ ಇಂಡಸ್ಟ್ರೀಸ್‌ ಅಧ್ಯಕ್ಷರಾಗಲಿದ್ದಾರೆ.

ಇನ್ನು ಗೋದ್ರೆಜ್‌ ಮತ್ತು ಬಾಯ್ಸ್‌ ಸಂಸ್ಥೆಯ ಅಧ್ಯಕ್ಷರಾಗಿ ಜಮ್ಷೆಡ್‌ ಮುಂದುವರಿಯಲಿದ್ದು, ಸ್ಮಿತಾ ಅವರ ಪುತ್ರಿ ನೈರಿಕಾ ಹೋಳ್ಕರ್‌ ಕಾರ್ಯಕಾರಿ ನಿರ್ದೇಶಕಿಯಾಗಲಿದ್ದಾರೆ. ಗೋದ್ರೆಜ್‌ ಕಂಪನಿಯನ್ನು 1897ರಲ್ಲಿ ಖ್ಯಾತ ವಕೀಲ ಹಾಗೂ ಉದ್ಯಮಿ ಆರ್ದೇಶಿರ್‌ ಸ್ಥಾಪಿಸಿದ್ದರು. ಸದ್ಯ ಕಂಪನಿ 17000 ಕೋಟಿ ರು. ಆಸ್ತಿ ಹೊಂದಿದೆ.