ಸಾರಾಂಶ
ಭೋಪಾಲ್: ಮಧ್ಯಪ್ರದೇಶದ ಮಂಡೋರಾ ಜಿಲ್ಲೆಯ ಮಿಂದೋರಿ ಕಾಡಿನ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಇನ್ನೋವಾ ಕಾರಲ್ಲಿ ಬರೋಬ್ಬರಿ 40 ಕೋಟಿ ರು. ಮೌಲ್ಯದ 52 ಕೇಜಿ ಚಿನ್ನ ಮತ್ತು 11 ಕೋಟಿ ರು. ಪತ್ತೆಯಾಗಿದ್ದು, ಇದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಾರಸುದಾರರಿಲ್ಲದ ಕಾರಿನಲ್ಲಿ ಏಳೆಂಟು ಬ್ಯಾಗ್‌ಗಳಿರುವುದು ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಹಣ ವಶಪಡಿಸಿಕೊಂಡಿದ್ದಾರೆ. ಈ ಚಿನ್ನ ನಗದು ಯಾರಿಗೆ ಸೇರಿದ್ದೂ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಇದು ಹಿಂದೆ ಆರ್‌ಟಿಒ ಅಧಿಕಾರಿಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸೌರಭ್ ಶರ್ಮಾ ಅವರಿಗೆ ಸೇರಿದ ಹಣ ಎಂದು ಕೆಲವು ಮೂಲಗಳು ಹೇಳಿವೆ. ಏಕೆಂದರೆ ಹಣ ಪತ್ತೆಯಾಗಿರುವ ಇನ್ನೋವಾ ಕಾರು ಚಂದನ್ ಸಿಂಗ್ ಗೌರ್ ಎನ್ನುವ ಬಿಲ್ಡರ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದು ಬಂದಿದೆ.
ಗುರುವಾರವಷ್ಟೇ ಸೌರಭ್ ಶರ್ಮಾ ಹಾಗೂ ಸಹಚರ ಚಂದನ್ ಸಿಂಗ್ ಗೌರ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡದಿತ್ತು. . ಶರ್ಮಾ ಮನೆಯಲ್ಲಿ ಈ ವೇಳೆ 2.5 ಕೋಟಿ ರು. ನಗದು, ಚಿನ್ನ, ಬೆಳ್ಳಿ ಆಭರಣಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಈ ಆಸ್ತಿಗಳ ಮೌಲ್ಯವೇ 3 ಕೋಟಿಗೂ ಅಧಿಕವಾಗಿತ್ತು. ಈಗ ಕಾರಲ್ಲಿ ಸಿಕ್ಕ ಹಣ ಮತ್ತು ಚಿನ್ನವೂ ಅವರದ್ದೇ ಎಂದು ಹೇಳಲಾಗಿದೆ. ಅಧಿಕಾರಿಗಳ ಕೈಗೆ ಸಿಗಬಾರದೆಂದು ಅವರು ಹಣ, ಚಿನ್ನವನ್ನು ಹೀಗೆ ಮುಚ್ಚಿಟ್ಟಿರಬಹುದು ಎಂದು ಊಹಿಸಲಾಗಿದೆ.