ಸಾರಾಂಶ
ನವದೆಹಲಿ: ಚಿನ್ನದ ಬೆಲೆ ಸತತ 5 ದಿನಗಳಿಂದ ಏರುಮಾರ್ಗದಲ್ಲಿದ್ದು, ಮಂಗಳವಾರ ಚಿನ್ನದ ಬೆಲೆ ಮತ್ತೆ 500 ರು. ಏರಿಕೆಯಾಗಿ, 85,800 ರು.ಗೆ ತಲುಪಿದೆ. ಜ್ಯುವೆಲರಿ ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಳವಾದ ಕಾರಣ ಚಿನ್ನದ ಬೆಲೆಯು ಸತತ 5 ದಿನವೂ ಏರಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆ 500 ರು. ಕಡಿಮೆಯಾಗಿ ಕೇಜಿಗೆ 95,500 ರು.ಗೆ ತಲುಪಿದೆ. ಈ ವರ್ಷದಲ್ಲಿ ಆರಂಭದಲ್ಲಿ 79,390 ರು. ಇದ್ದ ಚಿನ್ನದ ಬೆಲೆಯು ಕೇವಲ 35 ದಿನದಲ್ಲಿ 6410 ರು. ಹೆಚ್ಚಳವಾಗಿದೆ.
==ಸೆನ್ಸೆಕ್ಸ್ 1397 ಅಂಕಗಳ ಭಾರೀ ಏರಿಕೆ: ಸಂಪತ್ತು 6 ಲಕ್ಷ ಕೋಟಿ ರು.ಏರಿಕೆ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರ 1397 ಅಂಕಗಳ ಭಾರೀ ಏರಿಕೆ ಕಂಡು 78583ರಲ್ಲಿ ಅಂತ್ಯವಾಗಿದೆ. ಮಧ್ಯಂತರ ಅವಧಿಯಲ್ಲಿ 1471 ಅಂಕಗಳವರೆಗೂ ಏರಿಕೆ ಕಂಡಿದ್ದ ಸೂಚ್ಯಂಕ ಕೊನೆಗೆ ಅಲ್ಪ ಇಳಿಕೆ ಕಂಡಿತು. ಇನ್ನ ನಿಫ್ಟಿ 378 ಅಂಕ ಏರಿ 23739ರಲ್ಲಿ ಅಂತ್ಯವಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ, ಜಾಗತಿಕ ಆರ್ಥಿಕ ಹಿಂಜರಿತ ಭಾರತಕ್ಕೆ ಲಾಭ ತರುವ ನಿರೀಕ್ಷೆ, ಕೆನಡಾ, ಮೆಕ್ಸಿಕೋ ಜೊತೆಗಿನ ಅಮೆರಿಕ ತೆರಿಗೆ ಸಮರಕ್ಕೆ ತಡೆ ಬಿದ್ದ ವಿಷಯಗಳು ಷೇರುಪೇಟೆಗೆ ಉತ್ತಮ ಬಲ ತುಂಬಿದವು.
==ಅದಾನಿ ವರದಿಗೆ ಬದ್ಧ, ಒತ್ತಡಕ್ಕೆ ಸಂಸ್ಥೆ ಮುಚ್ಚಿಲ್ಲ: ಹಿಂಡನ್‌ಬರ್ಗ್ ಮುಖ್ಯಸ್ಥ
ನವದೆಹಲಿ: ಗೌತಮ್ ಅದಾನಿ ಸಮೂಹದ ವಿರುದ್ಧ ಸತತ ವರದಿ ಮೂಲಕ ಸಂಚಲನ ಸೃಷ್ಟಿಸಿದ್ದ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಕ್ಕೆ ಅದಾನಿ ಸೇರಿದಂತೆ ಯಾವುದೇ ವರದಿಗಳು ಕಾರಣವಲ್ಲ. ಬೆದರಿಕೆಗೆ ನಾವು ಬಾಗಿಲು ಮುಚ್ಚಿಲ್ಲ. ಈಗಲೂ ನಮ್ಮ ವರದಿಗೆ ಬದ್ಧವಾಗಿದ್ದೇವೆ ಎಂದು ಹಿಂಡರ್ನ್‌ಬರ್ಗ್ ಮುಖ್ಯಸ್ಥ ನಾಥನ್ ಆ್ಯಂಡರ್‌ಸನ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಥನ್, ‘ ನಾವು ನಮ್ಮ ಎಲ್ಲ ಸಂಶೋಧನಾ ವರದಿಗಳಿಗೆ ಶೇ.100ರಷ್ಟು ಬದ್ಧವಾಗಿದ್ದೇವೆ‘ ಎಂದಿದ್ದಾರೆ. 2017ರಲ್ಲಿ ಆರಂಭವಾದ ಹಿಂಡನ್‌ಬರ್ಗ್ ಕಳೆದ ತಿಂಗಳು ಸಂಸ್ಥೆಯನ್ನು ಮುಚ್ಚುವುದಾಗಿ ಘೋಷಿಸಿತ್ತು.
==ಮುಹೂರ್ತಕ್ಕೆ ಕಾಯ್ತಿದ್ದೀರಾ: ವಲಸಿಗರ ಗಡೀಪಾರು ಬಗ್ಗೆ ಅಸ್ಸಾಂಗೆ ಸುಪ್ರೀಂ ತರಾಟೆ
ನವದೆಹಲಿ: ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನು ಗುರುತಿಸಿದ್ದರೂ ಅವರನ್ನು ಗಡೀಪಾರು ಮಾಡುವ ಬದಲು ಅನಿರ್ದಿಷ್ಟಾವಧಿಯವರೆಗೆ ಬಂಧನ ಕೇಂದ್ರಗಳಲ್ಲಿ ಇರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ‘ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ?’ ಎಂದು ಅಸ್ಸಾಂ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ. ವಿದೇಶಿಗರ ನಿಖರ ವಿಳಾಸ ಪತ್ತೆಯಾಗದ ಕಾರಣ ಅವರ ಗಡೀಪಾರು ಪ್ರಕ್ರಿಯೆ ವಿಳಂಬವಾಗಿದೆ ಎಂಬ ಸರ್ಕಾರದ ಉತ್ತರಕ್ಕೆ ಪ್ರತಿಕ್ರಿಯಿಸಿದ ನ್ಯಾ। ಅಭಯ್ ಎಸ್. ಓಕ್ರಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ‘ಆ ಬಗ್ಗೆ ನೀವೇಕೆ ಕಾಳಜಿ ವಹಿಸಬೇಕು? ಒಮ್ಮೆ ವಿದೇಶಿಗರೆಂದು ಪತ್ತೆಯಾದ ಮೇಲೆ ಇಲ್ಲೇ ಇಟ್ಟುಕೊಳ್ಳುವುದು ಸರಿಯಲ್ಲ’ ಎಂದಿದ್ದು, 63 ಅಕ್ರಮ ವಲಸಿಗರನ್ನು ಕೂಡಲೇ ಗಡೀಪಾರು ಮಾಡಲು ನಿರ್ದೇಶಿಸಿದೆ.
==ಚೆನ್ನೈ ಮೂಲದ ಕಲ್ಲಿದ್ದಲು ಕಂಪನಿಯ ₹1000 ಕೋಟಿ ಆಸ್ತಿ ಜಪ್ತಿ: ಇ.ಡಿ ಮಾಹಿತಿ
ನವದೆಹಲಿ: ಚೆನ್ನೈ ಮೂಲದ ಕಂಪನಿ ಮೇಲೆ ಇತ್ತೀಚೆಗೆ ನಡೆಸಿದ ದಾಳಿ ವೇಳೆ 1000 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಆರ್‌ಕೆಎಂ ಪವರ್‌ಜೆನ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಮಾಲೀಕ ಆಂಡಾಳ್ ಆರ್ಮುಗಂ ಎಸ್.ಆರ್ಮುಗಂ ಮತ್ತು ಇನ್ನಿತರರ ಮೇಲೆ ಇ.ಡಿ. ಇತ್ತೀಚೆಗೆ ದಾಳಿ ನಡೆಸಿತ್ತು. ಆರ್‌ಕೆಎಂ ಕಂಪನಿಯ ಛತ್ತೀಸ್‌ಗಢದ ಕಲ್ಲಿದ್ದಲು ಗಣಿಹಂಚಿಕೆಯಲ್ಲಿ ವಂಚನೆ ಮೂಲಕ ಪಾಲು ಪಡೆದು ಅದಕ್ಕಾಗಿ ಸಾಲ ಪಡೆದು ಅದರ ಹಣವನ್ನು ವಿದೇಶಿ ಕಂಪನಿಗೆ ಹಸ್ತಾಂತರಿಸಿತ್ತು ಎಂಬ ಆರೋಪದ ಮೇಲೆ ಇ.ಡಿ. ದಾಳಿ ನಡೆಸಿದೆ.