ಸಾರಾಂಶ
ನವದೆಹಲಿ: ಚಿನ್ನದ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಒಂದೇ ದಿನ 6250 ರು. ಏರಿಕೆಯಾಗಿ, 96,450 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ ಬರೆದಿದೆ.
ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣದ ದರದಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.ದಿಲ್ಲಿಯಲ್ಲಿ ಶುಕ್ರವಾರ 99.9 ಶುದ್ಧತೆಯ ಚಿನ್ನ, 10 ಗ್ರಾಂಗೆ 6250 ಏರಿಕೆಯೊಂದಿಗೆ 96,450 ರು.ಗೆ ತಲುಪಿದೆ. ಗುರುವಾರ s 90,200 ರು. ಇತ್ತು. ಇನ್ನು ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, ಪ್ರತಿ ಕೇಜಿಗೆ 2300 ರು.ಗಳಷ್ಟು ಏರಿಕೆಯಾಗಿದ್ದು, 95,500 ರು.ಗೆ ತಲುಪಿದೆ.
ಟ್ರಂಪ್ ತೆರಿಗೆ ಸ್ಥಗಿತ ಎಫೆಕ್ಟ್: ಸೆನ್ಸೆಕ್ಸ್ 1310 ಅಂಕ ಏರಿಕೆ-
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿತೆರಿಗೆಯಿಂದ ಕುಸಿತ ಕಂಡಿದ್ದ ಭಾರತದ ಷೇರುಪೇಟೆ, ಟ್ರಂಪ್ ಜು.9ರವರಗೆ ತೆರಿಗೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಚೇತರಿಕೆ ಕಂಡಿದೆ. ಶುಕ್ರವಾರ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇ.2ರಷ್ಟು ಜಿಗಿತ ಕಂಡಿವೆ. ಇದರಿಂದ ಹೂಡಿಕೆದಾರರು 7.85 ಲಕ್ಷ ಕೋಟಿ ರು.ನಷ್ಟು ಶ್ರೀಮಂತರಾಗಿದ್ದಾರೆ.ಸೆನ್ಸೆಕ್ಸ್ ಶುಕ್ರವಾರ ಆರಂಭದಲ್ಲಿ 1620.18 ಅಂಕ ಏರಿಕೆ ಕಂಡಿದ್ದು, ಆದರೆ ದಿನದ ಅಂತ್ಯಕ್ಕೆ 1310 ಅಂಕ ಏರಿಕೆಯೊಂದಿಗೆ 75,467.3ರಲ್ಲಿ ಮುಕ್ತಾಯಗೊಂಡಿತು. ಇನ್ನು ನಿಫ್ಟಿ ಕೂಡ ಹೆಚ್ಚಳವಾಗಿದ್ದು, ದಿನದ ಅಂತ್ಯಕ್ಕೆ 524.75 ಅಂಕಗಳ ಜಿಗಿತದೊಂದಿಗೆ 22,923.9ರಲ್ಲಿ ಅಂತ್ಯಗೊಂಡಿತು.
ಆದರೆ ಚೀನಾ ಮತ್ತು ಅಮೆರಿಕದ ನಡುವೆ ಪ್ರತಿತೆರಿಗೆ ಉದ್ವಿಗ್ನತೆ ಕಾರಣ, ಜಾಗತಿಕ ಏಷ್ಯಾ ಮಾರುಕಟ್ಟೆ ಕುಸಿತ ಕಂಡಿದೆ. ಜಪಾನ್, ದಕ್ಷಿಣ ಕೊರಿಯಾದ ಷೇರುಪೇಟೆ ಇಳಿಕೆ ದಾಖಲಿಸಿವೆ.