ಭಾರೀ ನಷ್ಟದ ಕಾರಣ 2005ರಲ್ಲಿ ಸ್ಥಗಿತಗೊಂಡಿದ್ದ ಮಧ್ಯಪ್ರದೇಶ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆ (ಎಂಪಿಎಸ್‌ಆರ್‌ಟಿಸಿ) ಇದೀಗ 21 ವರ್ಷಗಳ ಬಳಿಕ ಸೇವೆ ಪುನಾರಂಭಿಸಿದೆ. ಈ ನಿಮಿತ್ತ ಮೊದಲ ಹಂತದಲ್ಲಿ 7 ನಗರಗಳಲ್ಲಿ ಸಂಚರಿಸಲಿರುವ 351 ಬಸ್‌ಗಳಿಗೆ ಚಾಲನೆ
ಭೋಪಾಲ್ : ಭಾರೀ ನಷ್ಟದ ಕಾರಣ 2005ರಲ್ಲಿ ಸ್ಥಗಿತಗೊಂಡಿದ್ದ ಮಧ್ಯಪ್ರದೇಶ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆ (ಎಂಪಿಎಸ್‌ಆರ್‌ಟಿಸಿ) ಇದೀಗ 21 ವರ್ಷಗಳ ಬಳಿಕ ಸೇವೆ ಪುನಾರಂಭಿಸಿದೆ. ಈ ನಿಮಿತ್ತ ಮೊದಲ ಹಂತದಲ್ಲಿ 7 ನಗರಗಳಲ್ಲಿ ಸಂಚರಿಸಲಿರುವ 351 ಬಸ್‌ಗಳಿಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಜತೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶುಕ್ರವಾರ ಚಾಲನೆ ನೀಡಿದರು.
ಸುಗಮ ಪರಿವಹನ ಸೇವೆ
‘ಮುಖ್ಯಮಂತ್ರಿ ಸುಗಮ ಪರಿವಹನ ಸೇವೆ ಮತ್ತು ಪಿಎಂ-ಇಬಸ್ ಸೇವೆ’ಯನ್ನು ಉದ್ಘಾಟಿಸಿ ಮಾತನಾಡಿದ ಯಾದವ್, ‘ಮೊದಲ ವರ್ಷದಲ್ಲಿ ರಾಜ್ಯಾದ್ಯಂತ 1,500 ಬಸ್‌ಗಳ ಸೇವೆ ಆರಂಭಿಸಿ, ಕ್ರಮೇಣ ಅದನ್ನು ಗ್ರಾಮಗಳಿಗೂ ವಿಸ್ತರಿಸಲಾಗುವುದು. ಶೇ.75ರಷ್ಟು ಗ್ರಾಮಗಳಿಗೆ ಬಸ್ ಸಂಪರ್ಕ ಒದಗಿಸುವ ಗುರಿಯಿದೆ’ ಎಂದರು. ಜತೆಗೆ, ಇದರಿಂದ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅವರು ಹೇಳಿದರು.
2005ರಲ್ಲೇ ಮುಚ್ಚಿತ್ತು:
ಮಧ್ಯಪ್ರದೇಶ ರಸ್ತೆ ಸಾರಿಗೆ ನಿಗಮವು ನೂರಾರು ಕೋಟಿ ರು. ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, 1995ರಲ್ಲೇ ಅದರ ಮುಚ್ಚುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಕೊನೆಗೆ 2005ರಲ್ಲಿ ಅದನ್ನು ಮುಚ್ಚಲಾಗಿತ್ತು. ಆ ಬಳಿಕ ಜನ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಮತ್ತೆ ಸರ್ಕಾರಿ ಬಸ್ ಸೇವೆಯನ್ನು ಆರಂಭಿಸಲಾಗಿದೆ.
