ಸಾರಾಂಶ
ರಾಜ್ಯ ಸರ್ಕಾರಗಳು ಕಳುಹಿಸುವ ಮಸೂದೆಗಳಿಗೆ ಅಂಕಿತ ಹಾಕದೆ ತಮ್ಮಲ್ಲೇ ಇಟ್ಟುಕೊಳ್ಳುವ ರಾಜ್ಯಪಾಲರುಗಳ ನಡೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಪ್ರಶ್ನಿಸಿದ್ದಾರೆ.
ಹೈದರಾಬಾದ್: ರಾಜ್ಯ ಸರ್ಕಾರಗಳು ಕಳುಹಿಸುವ ಮಸೂದೆಗಳಿಗೆ ಅಂಕಿತ ಹಾಕದೆ ತಮ್ಮಲ್ಲೇ ಇಟ್ಟುಕೊಳ್ಳುವ ರಾಜ್ಯಪಾಲರುಗಳ ನಡೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಪ್ರಶ್ನಿಸಿದ್ದಾರೆ. ರಾಜ್ಯಪಾಲರು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕು. ವಿಧೇಯಕಗಳಿಗೆ ಅಂಕಿತ ಹಾಕುವುದಕ್ಕೆ ವಿಳಂಬ ಮಾಡಬಾರದು. ಸಂವಿಧಾನದಡಿ ಸೂಚಿಸಲಾಗಿರುವ ಕರ್ತವ್ಯವನ್ನು ನಿರ್ವಹಿಸುವಂತೆ ರಾಜ್ಯಪಾಲರಿಗೆ ಹೇಳುವುದಕ್ಕೆ ನ್ಯಾಯಾಲಯಗಳಿಗೆ ಮುಜುಗರವಾಗುತ್ತದೆ ಎಂದಿದ್ದಾರೆ.
ಹೈದರಾಬಾದ್‌ನ ನಾಲ್ಸರ್ ವಿಶ್ವವಿದ್ಯಾಲಯದಲ್ಲಿ ನ್ಯಾಯಾಲಯಗಳು ಹಾಗೂ ಸಂವಿಧಾನ ಕುರಿತ ಸಮ್ಮೇಳನದ ಐದನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯಪಾಲರ ಕಾರ್ಯನಿರ್ವಹಣೆಯನ್ನು ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ತರುವುದು ಆರೋಗ್ಯಯುತ ಬೆಳವಣಿಗೆಯಲ್ಲ. ರಾಜ್ಯಪಾಲರ ಹುದ್ದೆ ಗಂಭೀರ ಸಾಂವಿಧಾನಿಕ ಸ್ಥಾನ. ಸಂವಿಧಾನ ಬದ್ಧವಾಗಿ ರಾಜ್ಯಪಾಲರು ಕಾರ್ಯನಿರ್ವಹಣೆ ಮಾಡಬೇಕು. ತನ್ಮೂಲಕ ನ್ಯಾಯಾಲಯಗಳ ಮುಂದೆ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ಸಲಹೆ ಮಾಡಿದ್ದಾರೆ.ತಮಿಳುನಾಡು ಹಾಗೂ ಪಂಜಾಬ್ ರಾಜ್ಯಪಾಲರು ರಾಜ್ಯ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಹಿನ್ನೆಲೆಯಲ್ಲಿ ನಾಗರತ್ನ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.