ನಟ ಗೋವಿಂದ, ಸುನಿತಾ 37 ವರ್ಷದ ದಾಂಪತ್ಯ ಅಂತ್ಯ?

| Published : Feb 26 2025, 01:00 AM IST

ಸಾರಾಂಶ

ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ಅವರ 37 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಮುಂಬೈ: ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ಅವರ 37 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಕೆಲ ಸಮಯದಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗೋವಿಂದ ಅವರ ಜೀವನಶೈಲಿ ಮತ್ತು ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಕುರಿತು ಸುನೀತಾ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಮರಾಠಿ ನಟಿಯೊಬ್ಬಳ ಜತೆಗೆ ಗೋವಿಂದ ಅವರ ವಿವಾಹೇತರ ಸಂಬಂಧವೇ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ.

ಗೋವಿಂದ ಮತ್ತು ಸುನೀತಾ ಅಹುಜಾ 1987ರಲ್ಲಿ ವಿವಾಹವಾಗಿದ್ದರು. 1988ರಲ್ಲಿ ಮಗಳು ಹುಟ್ಟಿದ ಬಳಿಕ ತಮ್ಮ ಮದುವೆಯನ್ನು ಘೋಷಿಸಿದ್ದರು. ಅವರಿಗೆ ಟೀನಾ, ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಉಕ್ರೇನ್‌ ಯುದ್ಧ: ನೀತಿ ಬದಲಿಸಿ ರಷ್ಯಾಗೆ ಅಮೆರಿಕ ಬೆಂಬಲ!

ವಿಶ್ವಸಂಸ್ಥೆ: ಅಚ್ಚರಿಯ ನಡೆಯೊಂದರಲ್ಲಿ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಈವರೆಗೆ ಉಕ್ರೇನ್‌ ಪರ ನಿಲುವು ತಾಳಿದ್ದ ಅಮೆರಿಕ ತನ್ನ ನೀತಿ ಬದಲಿಸಿಕೊಂಡಿದೆ. ಉಕ್ರೇನ್‌ ವಿರುದ್ಧದ ಯುದ್ಧದಿಂದ ರಷ್ಯಾ ಹಿಂದೆ ಸರಿಯಬೇಕು ಮತ್ತು ಯುದ್ಧವನ್ನು ಖಂಡಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಗೊತ್ತುವಳಿ ವಿರುದ್ಧ ಅಮೆರಿಕ ಮತ ಹಾಕಿದೆ.ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ವಿರುದ್ಧ ಮತ ಹಾಕಿದ 18 ದೇಶಗಳಲ್ಲಿ ಅಮೆರಿಕ ಕೂಡ ಇದೆ. ಆದರೆ 193 ದೇಶಗಳ ಪೈಕಿ ಗೊತ್ತುವಳಿ ಪರ 93 ಮತ ಬಿದ್ದಿದ್ದು, ಅದು ಅಂಗಿಕಾರವಾಗಿದೆ. ಭಾರತ ಸೇರಿ 65 ದೇಶಗಳು ಗೈರುಹಾಜರಾಗಿವೆ.ಇತ್ತೀಚೆಗೆ ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷರಾದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜತೆ ಸಂಬಂಧ ಸುಧಾರಿಸುತ್ತಿದೆ. ಆದರೆ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ ಜತೆ ಸಂಬಂಧ ಹಳಸುತ್ತಿದೆ. ಅದರ ನಡುವೆಯೇ ಈ ವಿದ್ಯಮಾನ ನಡೆದಿದೆ.

ಟ್ರಂಪ್ ಮಸ್ಕ್‌ರ ಪಾದ ನೆಕ್ಕುವ ವಿಡಿಯೋ!

ವಾಷಿಂಗ್‌ಟನ್: ಸೋಮವಾರ ಅಮೆರಿಕದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ (ಎಚ್‌ಯುಡಿ) ಕಚೇರಿಯಲ್ಲಿ, ‘ನಿಜವಾದ ರಾಜ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮುಖ್ಯ ಸಲಹೆಗಾರ ಎಲಾನ್ ಮಸ್ಕ್‌ರ ಪಾದಗಳನ್ನು ನೆಕ್ಕುತ್ತಿರುವ ಎಐ (ಕೃತಕ ಬುದ್ಧಿಮತ್ತೆ) ನಿರ್ಮಿತ ವೀಡಿಯೊವನ್ನು ನಿರಂತರವಾಗಿ ಪ್ರಸಾರ ಮಾಡಲಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಕಳೆದ ವಾರವಷ್ಟೇ ಟ್ರಂಪ್ ಮಸ್ಕ್‌ರನ್ನುದ್ದೇಶಿಸಿ ‘ಲಾಂಗ್ ಲಿವ್ ದಿ ರಿಯಲ್ ಕಿಂಗ್’ (ನಿಜವಾದ ರಾಜ ಚಿರಾಯುವಾಗಲಿ) ಎಂದು ಟ್ರುತ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದೇ ಬರಹವನ್ನು ಉಲ್ಲೇಖಿಸಿ ವಿಡಿಯೋ ಪ್ರಸಾರ ಮಾಡಲಾಗಿದೆ. ಎಚ್‌ಯುಡಿಯ ಮಾನಿಟರ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಶಂಕೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಟ್ರಂಪ್‌ ಆಡಳಿತವು ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದೆ. ಹೀಗಾಗಿ ಇಂಥ ವಿಡಿಯೋ ಪ್ರಸಾರ ಮಾಡಲಾಗಿದೆ ಎನ್ನಲಾಗಿದೆ.

ಕೈ ವಿರುದ್ಧ ಸಿಡಿದ ಬೆನ್ನಲ್ಲೇ ಗೋಯಲ್‌ ಜತೆ ತರೂರ್‌ ಫೋಟೋ

ನವದೆಹಲಿ: ಕಾಂಗ್ರೆಸ್‌ ತಮ್ಮ ವಿರುದ್ಧ ನಿರ್ಲಕ್ಷ್ಯ ತೋರಿದರೆ ಬೇರೆಯದೇ ಆಲೋಚನೆ ಮಾಡಬೇಕಾಗುತ್ತದೆ ಎಂದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಕೇಂದ್ರ ಸಚಿವ ಪೀಯೂಷ್‌ ಗೋಯಲ್ ಅವರೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.ಶಶಿ ತರೂರ್‌ ಮಂಗಳವಾರ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್ ಮತ್ತು ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್‌ ಜೊತೆಗಿನ ಫೋಟೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಚರ್ಚೆ ನಡೆದಿರುವುದಾಗಿ ತರೂರ್‌ ಬರೆದುಕೊಂಡಿದ್ದಾರೆ.ಕೇರಳ ಕಾಂಗ್ರೆಸ್‌ ಕಿಡಿಕಿಡಿ:

ಆದರೆ ಕಾಂಗ್ರೆಸ್‌ ಜೊತೆಗಿನ ಸಂಬಂಧ ಹಾಳಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ, ತರೂರ್ ವಿರುದ್ಧ ಕೇರಳ ಕಾಂಗ್ರೆಸ್‌ ನಾಯಕರು ಸಭೆ ನಡೆಸಿ ದೂರಲು ನಿರ್ಧರಿಸಿದ್ದಾರೆ.