ಸಾರಾಂಶ
ನವದೆಹಲಿ : ದೇಶದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದ್ದು, ಈ ಬೆಲೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 71 ಸಾವಿರ ಟನ್ ಈರುಳ್ಳಿ ಆಮದು ಖರೀದಿ ಮಾಡಿದೆ. ಇದರ ಮುಂದುವರಿದ ಭಾಗವಾಗಿ 5 ಲಕ್ಷ ಟನ್ ವರೆಗೆ ಖರೀದಿ ಮಾಡಲಿದೆ.
ಈರುಳ್ಳಿ ಬೆಲೆ ಮುಂಚೆ ಕೇಜಿಗೆ 20-25 ರು. ಇದ್ದಿದ್ದು, ಈಗ 40-45 ರು. ಸನಿಹಕ್ಕೆ ಹೆಚ್ಚಿದೆ. ಹೀಗಾಗಿ ಸರ್ಕಾರವು ಹೆಚ್ಚು ದಾಸ್ತಾನು ಮಾಡಿ ಇಟ್ಟುಕೊಂಡು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.
ಈ ಬಗ್ಗೆ ಶನಿವಾರ ಹೇಳಿಕೆ ನೀಡಿರುವ ಅಧಿಕಾರಿಗಳು, ‘ಕಳೆದ ವರ್ಷದಂತೆ ಈ ವರ್ಷವೂ ಭಾರತದಲ್ಲಿ ಉಷ್ಣ ಮಾರುತ ಹಾಗೂ ಮಳೆ ಕೊರತೆಯಿಂದ ಈರುಳ್ಳಿ ಉತ್ಪಾದನೆ ಶೇ.20ರಷ್ಟು ಕುಂಠಿತವಾಗಿದೆ. ಹೀಗಾಗಿ ಬೆಲೆ ಏರಿದೆ. ಬೆಲೆ ಹತ್ತಿಕ್ಕುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈರುಳ್ಳಿ ರಫ್ತಿನ ಮೇಲೆ ನಿಯಂತ್ರಣ, ರಫ್ತಿನ ಮೇಲೆ ಶೇ.40ರಷ್ಟು ಸುಂಕ, ಸೇರಿದಂತೆ ವಿವಿಧ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 74 ಸಾವಿರ ಟನ್ ಖರೀದಿ ಮಾಡಿತ್ತು. ಆದರೆ ಈ ವರ್ಷ 71 ಸಾವಿರ ಟನ್ ಖರೀದಿ ಮಾಡಿದೆ. ಖರೀದಿಸಿದ ಈರುಳ್ಳಿಯನ್ನು ಬೆಲೆ ಏರಿಕೆ ವೇಳೆ ಮಾರುಕಟ್ಟೆಗೆ ಬಿಟ್ಟು ಸಾಮಾನ್ಯ ಬೆಲೆಗೆ ಒದಗಿಸಲಾಗುವದು’ ಎಂದಿದ್ದಾರೆ.
ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ವರ್ಷ ಭಾರತದಲ್ಲಿ 254 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಕೃಷಿ ಇಲಾಖೆ ಅಂದಾಜು ಮಾಡಿತ್ತು.