ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಐಟಿ ಕಾಯ್ದೆ ಮಂಡನೆ ನಿರೀಕ್ಷೆ

| Published : Jan 19 2025, 02:16 AM IST / Updated: Jan 19 2025, 04:50 AM IST

ಸಾರಾಂಶ

ಈ ಬಾರಿಯ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲು ಸಾಧ್ಯತೆ ಇದ್ದು, ಈ ಮಸೂದೆಯು ಈಗಿರುವ ತೆರಿಗೆ ಕಾನೂನನ್ನು ಸರಳಗೊಳಿಸುವ ಮತ್ತು ಒಟ್ಟಾರೆ ಐಟಿ ಕಾನೂನಿನ ಪುಟಗಳನ್ನು ಶೇ.60ರಷ್ಟು ಕಡಿತಗೊಳಿಸುವ ಗುರಿ ಹೊಂದಿದೆ.

ನವದೆಹಲಿ: ಈ ಬಾರಿಯ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲು ಸಾಧ್ಯತೆ ಇದ್ದು, ಈ ಮಸೂದೆಯು ಈಗಿರುವ ತೆರಿಗೆ ಕಾನೂನನ್ನು ಸರಳಗೊಳಿಸುವ ಮತ್ತು ಒಟ್ಟಾರೆ ಐಟಿ ಕಾನೂನಿನ ಪುಟಗಳನ್ನು ಶೇ.60ರಷ್ಟು ಕಡಿತಗೊಳಿಸುವ ಗುರಿ ಹೊಂದಿದೆ.

ಆರು ದಶಕಗಳಷ್ಟು ಹಳೆಯ 1961ರ ಆದಾಯ ತೆರಿಗೆ ಕಾನೂನನ್ನು ಆರು ತಿಂಗಳೊಳಗೆ ಸಮಗ್ರವಾಗಿ ಪುನರ್‌ ಪರಿಶೀಲನೆ ನಡೆಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಹಿಂದೆ ಹೇಳಿದ್ದರು. ಇದು ಸಂಪೂರ್ಣವಾಗಿ ಹೊಸ ಮಸೂದೆಯಾಗಿದ್ದು, ಈಗಾಗಲೇ ಕಾನೂನು ಸಚಿವಾಲಯ ಕರಡು ಮಸೂದೆಯನ್ನು ಅಂತಿಮಗೊಳಿಸಿದೆ. ಇದೇ ಬಜೆಟ್‌ ಅಧಿವೇಶನದ 2ನೇ ಭಾಗದಲ್ಲಿ ಮಸೂದೆ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್‌ ಅಧಿವೇಶನ ಜ.31ರಿಂದ ಏಪ್ರಿಲ್‌ 4ರ ವರೆಗೆ ನಡೆಯಲಿದೆ. ಇದರಲ್ಲಿ ಮೊದಲ ಹಂತ ಜ.31ರಿಂದ ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆ.1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಆ ಬಳಿಕ ಮಾ.10ರಿಂದ ಏ.4ರ ವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ.

ಸಿಬಿಡಿಟಿಯು ಆಂತರಿಕ ಸಮಿತಿಯೊಂದನ್ನು ರಚಿಸಿದ್ದು, ಇದು ಐಟಿ ಕಾಯ್ದೆಯು ಸರಳವಾಗಿರಬೇಕು, ಸಂಕ್ಷಿಪ್ತವಾಗಿರಬೇಕು ಮತ್ತು ಸುಲಭವಾಗಿ ಅರ್ಥವಾಗುವಂತಿರಬೇಕು. ಈ ಮೂಲಕ ವಿವಾದಗಳು, ದಾವೆಗಳು ಕಡಿಮೆಯಾಗಿ ಮತ್ತು ತೆರಿಗೆದಾರರಿಗೆ ತೆರಿಗೆ ಕುರಿತು ಖಚಿತತೆ ಬರುವ ರೀತಿಯಲ್ಲಿ ಹೊಸ ಕಾಯ್ದೆ ಇರುವಂತೆ ಮೇಲ್ವಿಚಾರಣೆ ನಡೆಸುತ್ತಿದೆ. 22 ವಿಶೇಷ ಉಪ ಸಮಿತಿಗಳು ಐಟಿ ಕಾಯ್ದೆಯ ವಿವಿಧ ಅಂಶಗಳ ಕುರಿತ ಪುನರ್‌ ಪರಿಶೀಲನೆಗೆಂದೇ ರಚಿಸಲಾಗಿದೆ.

ಇನ್ನು ಕಾಯ್ದೆಯಲ್ಲಿ ಬಳಸುವ ಭಾಷೆಯನ್ನು ಸರಳಗೊಳಿಸುವಿಕೆ, ವಿವಾದಗಳ ಕಡಿತ ಮತ್ತು ಅನಗತ್ಯ ಅಂಶಗಳನ್ನು ಕಾಯ್ದೆಯಿಂದ ತೆಗೆದುಹಾಕುವುದು ಸೇರಿ ನಾಲ್ಕು ವಿಭಾಗಗಳಲ್ಲಿ ಸುಧಾರಣೆಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆಯು 6,500 ಸಲಹೆಗಳನ್ನು ಸ್ವೀಕರಿಸಿದೆ. ಇದನ್ನು ಆಧರಿಸಿ ಕೆಲ ನಿಬಂಧನೆಗಳು ಮತ್ತು ಪರಿಚ್ಛೇದಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

1961ರ ಆದಾಯ ತೆರಿಗೆ ಕಾಯ್ದೆಯು ವೈಯಕ್ತಿಕ ಐಟಿ, ಕಾರ್ಪೊರೇಟ್ ಟ್ಯಾಕ್ಸ್‌, ಸೆಕ್ಯುರಿಟೀಸ್‌ ಟ್ರಾನ್ಸಾಕ್ಷನ್‌ ತೆರಿಗೆ ಸೇರಿ ವಿವಿಧ ತೆರಿಗೆಗಳಿಗೆ ಸಂಬಂಧಿಸಿದ ಸುಮಾರು 298 ಸೆಕ್ಷನ್‌ಗಳು ಮತ್ತು 23 ಪರಿಚ್ಛೇದಗಳನ್ನು ಒಳಗೊಂಡಿದೆ.