‘ಒಂದು ದೇಶ ಒಂದು ಚುನಾವಣೆ’ ಸಾಕಾರ ನಿಟ್ಟಿನಲ್ಲಿ ಶೀಘ್ರ ಕೇಂದ್ರದಿಂದ 3 ವಿಧೇಯಕ ಮಂಡನೆ ?

| Published : Sep 30 2024, 01:19 AM IST / Updated: Sep 30 2024, 05:47 AM IST

ಸಾರಾಂಶ

‘ಒಂದು ದೇಶ ಒಂದು ಚುನಾವಣೆ’ ಸಾಕಾರಕ್ಕೆ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡಿಸಲಿದೆ. ಈ ಪೈಕಿ ಎರಡು ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳಾಗಿದ್ದು, ಒಂದಕ್ಕೆ ರಾಜ್ಯಗಳ ಅನುಮತಿ ಕಡ್ಡಾಯವಾಗಿದೆ.

 ನವದೆಹಲಿ : ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಸಾಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡನೆ ಮಾಡುವ ನಿರೀಕ್ಷೆ ಇದೆ. ಈ ಪೈಕಿ 2 ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳಾಗಿವೆ. ಅದರಲ್ಲಿ ಒಂದಕ್ಕೆ ಅರ್ಧದಷ್ಟು ರಾಜ್ಯಗಳ ಅನುಮತಿ ಕಡ್ಡಾಯವಾಗಿದೆ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಸಂಬಂಧ ಸಂವಿಧಾನದ ಸೆಕ್ಷನ್‌ 82 ಎಗೆ ತಿದ್ದುಪಡಿ ತರುವುದು ಮೊದಲ ಮಸೂದೆಯಾಗಿರಲಿದೆ. ಅದೇ ಮಸೂದೆಯ ಮೂಲಕ ಸಂವಿಧಾನದ 83(2)ಕ್ಕೂ ತಿದ್ದುಪಡಿ ತರಲಾಗುತ್ತದೆ. ಈ ವಿಧೇಯಕಕ್ಕೆ ರಾಜ್ಯಗಳ ಅನುಮತಿ ಬೇಕಾಗಿರುವುದಿಲ್ಲ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಜತೆಗೇ ಸ್ಥಳೀಯ ಸಂಸ್ಥೆಗಳನ್ನು ನಡೆಸುವ ಸಂಬಂಧ 2ನೇ ವಿಧೇಯಕವನ್ನು ಸರ್ಕಾರ ಮಂಡನೆ ಮಾಡುವ ಅಗತ್ಯವಿದೆ. ಆ ಮಸೂದೆಗೆ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ.

ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆಗಳನ್ನು ಹೊಂದಿರುವ ಪುದುಚೇರಿ, ದೆಹಲಿ ಹಾಗೂ ಜಮ್ಮು-ಕಾಶ್ಮೀರಗಳ ಅಸೆಂಬ್ಲಿ ಅವಧಿಯನ್ನು ದೇಶದ ಇತರೆ ವಿಧಾನಸಭೆ ಹಾಗೂ ಲೋಕಸಭೆ ಜತೆ ಸರಿಹೊಂದಿಸಲು ಮೂರನೇ ತಿದ್ದುಪಡಿಯನ್ನು ಮಂಡಿಸಲಾಗುತ್ತದೆ. ಇದಕ್ಕೆ ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರಬೇಕಾಗಿರುವುದಿಲ್ಲ. ರಾಜ್ಯಗಳ ಅನುಮತಿಯೂ ಬೇಕಾಗಿರುವುದಿಲ್ಲ.