ಸಾರಾಂಶ
ಭಾರತದ ಲಕ್ಷದ್ವೀಪದ ದ್ವೀಪಗಳನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಬೇಕು ಎಂಬ ಕೂಗಿನ ನಡುವೆಯೇ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ
ನವದೆಹಲಿ: ಭಾರತದ ಲಕ್ಷದ್ವೀಪದ ದ್ವೀಪಗಳನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಬೇಕು ಎಂಬ ಕೂಗಿನ ನಡುವೆಯೇ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಈ ವಿಮಾನ ನಿಲ್ದಾಣವು ನಾಗರಿಕ ವಿಮಾನಗಳಲ್ಲದೆ, ಯುದ್ಧ ವಿಮಾನ ಹಾಗೂ ಇತರ ಸೇನಾ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಲಿದೆ. ಅರ್ಥಾತ್ ಎಲ್ಲ ರೀತಿಯ ವಿಮಾನಗಳು ಇಳಿಯಬಲ್ಲ ಜಂಟಿ ಏರ್‌ಫೀಲ್ಡ್ ಸಿದ್ಧಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ವಿಮಾನ ನಿಲ್ದಾಣ ನಿರ್ಮಿಸಲು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಲಾಗಿತ್ತು. ಆದರೆ ಅದನ್ನು ರಕ್ಷಣಾ ಬಳಕೆಗೂ ಲಭ್ಯವಾಗುವಂಥ ಕಲ್ಪನೆಯನ್ನು ಇತ್ತೀಚೆಗೆ ಮುಂದಿಡಲಾಯಿತು. ಅಂದಿನಿಂದ, ಯೋಜನೆಯು ಸಕ್ರಿಯವಾಗಿ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮಿಲಿಟರಿ ದೃಷ್ಟಿಕೋನದಿಂದ ನೋಡುವುದಾದರೆ, ದ್ವೀಪಗಳಲ್ಲಿನ ವಾಯುನೆಲೆಯು ಭಾರತಕ್ಕೆ ಬಲವಾದ ಸಾಮರ್ಥ್ಯವನ್ನು ನೀಡುತ್ತದೆ. ಏಕೆಂದರೆ ಇದನ್ನು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದ ಪ್ರದೇಶದ ಮೇಲೆ ಕಣ್ಣಿಡಲು ನೆಲೆಯಾಗಿ ಬಳಸಬಹುದು.
ಇದು ಇತ್ತೀಚೆಗೆ ಸರಕುಗಳ ಮೇಲೆ ಡ್ರೋನ್ ದಾಳಿ, ಹಡಗು ಹೈಜಾಕ್ ಸೇರಿದಂತೆ ಸೇರಿದಂತೆ ಹಲವು ಚಟುವಟಿಕೆಗಳು ಅರಬ್ಬಿ ಸಮುದ್ರದಲ್ಲಿ ನಡೆಯುತ್ತಿವೆ. ಹೀಗಾಗಿ ಇಂಥವುಗಳ ಮೇಲೆ ನಿಗಾ ಇಡಲು ಲಕ್ಷದ್ವೀಪದ ಪ್ರಸ್ತಾವಿತ ಏರ್‌ಪೋರ್ಟ್ ನೆರವಾಗಲಿದೆ.
ಪ್ರಸ್ತುತ ದ್ವೀಪದ ಭೂಪ್ರದೇಶದಲ್ಲಿ ಕೇವಲ ಒಂದು ಏರ್‌ಸ್ಟ್ರಿಪ್ ಇದ್ದು, ಅದು ಅಗಟ್ಟಿ ಎಂಬ ದ್ವೀಪದಲ್ಲಿದೆ ಮತ್ತು ಇದು ಕೆಲವು ರೀತಿಯ ವಿಮಾನಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ.