ಯುಪಿಐ, ಎಟಿಎಂ ಮೂಲಕವೂ ಪಿಎಫ್: ಮಾಸಾಂತ್ಯಕ್ಕೆ ಜಾರಿ?

ನವದೆಹಲಿ: ಕೇಂದ್ರ ಸರ್ಕಾರವು 2025-26ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.25ರಷ್ಟು ನಿಗದಿ ಮಾಡಿದೆ. ಈ ತಿಂಗಳ ಅಂತ್ಯದೊಳಗೆ ನೌಕರರ ಖಾತೆಗೆ ಹಣ ಜಮಾ ಆಗಲಿದ್ದು ಇದರಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನ ಸಿಗಲಿದೆ.

ಮಾರ್ಚ್‌ನಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಾನ್ಸೂಖ್‌ ಮಾಂಡವೀಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ಕಾರ್ಯರೂಪಕ್ಕೆ ಬರಲಿದೆ. ಈ ಮೂಲಕ ಸತತ ಮೂರನೇ ವರ್ಷವೂ ಇಪಿಎಫ್‌ ಬಡ್ಡಿದರ ಶೇ.8.25 ರಷ್ಟು ನಿಗದಿಯಾದಂತಾಗಿದೆ. 2024-25, 2023-24ರಲ್ಲಿಯೂ ಇದೇ ಬಡ್ಡಿದರವಿತ್ತು.

ಮಾಸಾಂತ್ಯಕ್ಕೆ ಯುಪಿಐ, ಎಟಿಎಂನಲ್ಲಿ:

ಈ ಹಿಂದೆ ಘೋಷಿಸಲಾಗಿದ್ದ ಯುಪಿಐ ಹಾಗೂ ಎಟಿಎಂ ಮೂಲಕ ಇಪಿಎಫ್‌ಒ ಹಣ ಹಿಂಪಡೆಯುವ ವ್ಯವಸ್ಥೆ ತಿಂಗಳಾಂತ್ಯದೊಳಗೆ ಜಾರಿಗೆ ಬರುವ ನಿರೀಕ್ಷೆ ಇದೆ. ಶೇ.75ರಷ್ಟು ಪಿಎಫ್‌ ಹಣವನ್ನು ಈ ಮೂಲಕ ವಾಪಸು ಪಡೆಯಲು ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.