ಚುನಾವಣೆ ಕುರಿತ ಎಲೆಕ್ಟ್ರಾನಿಕ್‌ ದಾಖಲೆ ಸಾರ್ವಜನಿಕರಿಗೆ ಕಟ್‌ : ಕೇಂದ್ರ ಸರ್ಕಾರ ತಿದ್ದುಪಡಿ

| Published : Dec 22 2024, 01:33 AM IST / Updated: Dec 22 2024, 04:37 AM IST

ಚುನಾವಣೆ ಕುರಿತ ಎಲೆಕ್ಟ್ರಾನಿಕ್‌ ದಾಖಲೆ ಸಾರ್ವಜನಿಕರಿಗೆ ಕಟ್‌ : ಕೇಂದ್ರ ಸರ್ಕಾರ ತಿದ್ದುಪಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ  ದಾಖಲೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದ್ದ ನಿಯಮವೊಂದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.   ದಾಖಲೆಗಳು ಸುಲಭವಾಗಿ ಸಾರ್ವಜನಿಕರಿಗೆ ಲಭಿಸದಂತೆ ತಡೆದಿದೆ.

ನವದೆಹಲಿ: ಚುನಾವಣೆ ಸಂಬಂಧಿತ ದಾಖಲೆಗಳನ್ನು ಪಡೆಯಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದ್ದ ನಿಯಮವೊಂದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಆ ಮೂಲಕ ಸಿಸಿಟೀವಿ ದೃಶ್ಯಗಳು, ವೆಬ್‌ಕಾಸ್ಟಿಂಗ್‌ ತುಣುಕುಗಳು, ಅಭ್ಯರ್ಥಿಗಳ ವಿಡಿಯೋಗಳು ಸೇರಿದಂತೆ ಕೆಲ ಎಲೆಕ್ಟ್ರಾನಿಕ್‌ ದಾಖಲೆಗಳು ಸುಲಭವಾಗಿ ಸಾರ್ವಜನಿಕರಿಗೆ ಲಭಿಸದಂತೆ ತಡೆದಿದೆ.

ಚುನಾವಣಾ ಆಯೋಗದ ಸಲಹೆಯಂತೆ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಚುನಾವಣಾ ನಿಯಮಗಳ ನಡವಳಿಕೆ, 1961ರ 93(2)(ಎ) ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಸಾರ್ವಜನಿಕರಿಗೆ ಲಭ್ಯವಿದ್ದ ಕಡತಗಳನ್ನು ನಿರ್ಬಂಧಿಸಿದೆ.

ಇದುವರೆಗೂ ಇದ್ದ ನಿಯಮಗಳ ಅನ್ವಯ, ಅಭ್ಯರ್ಥಿಗಳ ನಾಮಪತ್ರ, ಏಜೆಂಟ್‌ಗಳ ವಿವರ ಸೇರಿದಂತೆ ಎಲ್ಲಾ ಪತ್ರಗಳು ಸಾರ್ವಜನಿಕರಿಗೆ ಲಭ್ಯವಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಮತಗಟ್ಟೆ ಒಳಗೆ ಸಿಸಿಟೀವಿ ಅಳವಡಿಕೆ, ಮತದಾನದ ಕೇಂದ್ರದ ವೆಬ್‌ಕಾಸ್ಟಿಂಗ್‌ ಬಳಕೆ ಆರಂಭವಾಗಿತ್ತು. ನಿಯಮಗಳಲ್ಲಿ ಇವುಗಳನ್ನು ಸಾರ್ವಜನರಿಗೆ ನೀಡುವ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ, ಹಲವು ಸಾರ್ವಜನಿಕರು ಇಂಥ ಮಾಹಿತಿಗಳನ್ನು ಆಯೋಗದಿಂದ ಬಯಸುತ್ತಿದ್ದರು.

ಆದರೆ ಮತಗಟ್ಟೆ ಒಳಗಿನ ಸಿಸಿಟೀವಿ ದೃಶ್ಯ, ವೆಬ್‌ಕಾಸ್ಟಿಂಗ್‌ ದೃಶ್ಯಗಳು ಸಕಾರಣವಿಲ್ಲದೆ ಸಾರ್ವಜನಿಕರ ಕೈಸೇರಿದರೆ ಅದರ ದುರ್ಬಳಕೆ ಸಾಧ್ಯತೆ ಇದೆ, ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅದನ್ನು ತಿರುಚುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಯಮಗಳಿಗೆ ತಿದ್ದುಪಡಿ ತರಬೇಕೆಂದು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ಅದರನ್ವಯ, ಇದೀಗ ದಾಖಲೆಗಳಲ್ಲಿ ದಾಖಲೆ ಪತ್ರಗಳು ಎಂಬ ಮಾಹಿತಿ ಮುಂದೆ, ಈ ನಿಯಮದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ ಎಂಬ ಪದ ಸೇರಿಸಲಾಗಿದೆ. ಈ ಮೂಲಕ ಕಾಗದ ಪತ್ರಗಳು ಮಾತ್ರವೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಅಭ್ಯರ್ಥಿಗಳಿಗೆ ಲಭ್ಯ:

ಆದರೆ ಈ ತಿದ್ದುಪಡಿ ಕೇವಲ ಸಾರ್ವಜನಿಕರಿಗೆ ಮಾತ್ರ ಸಂಬಂಧಿಸಿದ್ದು, ಅಭ್ಯರ್ಥಿಗಳಿಗೆ ಈ ಹಿಂದಿನಂತೆ ಎಲ್ಲಾ ಕಾಗದ ಪತ್ರ ಮತ್ತು ಎಲೆಕ್ಟ್ರಾನಿಕ್‌ ದಾಖಲೆಗಳು ಲಭ್ಯವಿರುತ್ತದೆ. ಜೊತೆಗೆ ಸಾರ್ವಜನಿಕರಿಗೆ ಎಲೆಕ್ಟ್ರಾನಿಕ್ ದಾಖಲೆಗಳು ಬೇಕಿದ್ದರೆ ನ್ಯಾಯಾಲಯದಿಂದ ಆದೇಶ ಪಡೆದು ಸ್ವೀಕರಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪಾರದರ್ಶಕತೆಗೆ ಆಯೋಗ ಹೆದರಿದೆ: ಕಾಂಗ್ರೆಸ್‌ ಕಿಡಿ

ನವದೆಹಲಿ: ಚುನಾವಣಾ ನಿಯಮಕ್ಕೆ ತಿದ್ದುಪಡಿ ತಂದ ಸರ್ಕಾರದ ನಡೆಯನ್ನು ಕಾಂಗ್ರೆಸ್‌ ಖಂಡಿಸಿದ್ದು, ಚುನಾವಣಾ ಆಯೋಗ ಪಾರದರ್ಶಕತೆಗೆ ಏಕೆ ಹೆದರಿದೆ ಎಂದು ಪ್ರಶ್ನಿಸಿದೆ.ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಇತ್ತೀಚೆಗೆ ಚುನಾವಣಾ ಆಯೋಗ ನಿರ್ವಹಿಸುವ ಚುನಾವಣಾ ಪ್ರಕ್ರಿಯೆಗಳ ಸಮಗ್ರತೆ ನಾಶವಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದು ಆರೋಪಿಸಿದ್ದಾರೆ. ಜತೆಗೆ, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

‘ಭ್ರಷ್ಟಾಚಾರ ಹಾಗೂ ಅನೈತಿಕ ಚಟುವಟಿಕೆಗಳನ್ನು ಬಹಿರಂಗಪಡಿಸಿ ನಿಗ್ರಹಿಸಲು ಪಾರದರ್ಶಕತೆ ಅಗತ್ಯ. ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಈ ಪ್ರಕ್ರಿಯೆಯಲ್ಲಿ ವಿಶ್ವಾಸವಿಡಲು ಸಾಧ್ಯವಾಗುತ್ತದೆ’ ಎಂದು ರಮೇಶ್‌ ಅಭಿಪ್ರಾಯಪಟ್ಟರು.