ಜಿಎಸ್ಟಿ ಬೆಳವಣಿಗೆ ಕರ್ನಾಟಕ ದೇಶಕ್ಕೆ ನಂ.1

| N/A | Published : Sep 02 2025, 01:00 AM IST / Updated: Sep 02 2025, 06:00 AM IST

ಸಾರಾಂಶ

 ಆಗಸ್ಟ್‌ ತಿಂಗಳಲ್ಲಿ ದೇಶದಲ್ಲಿ 1.86 ಲಕ್ಷ ಕೋಟಿ ರು.ನಷ್ಟು   ಜಿಎಸ್ಟಿ  ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.5ರಷ್ಟು ಹೆಚ್ಚಾಗಿದೆ. ಇನ್ನು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.10ರಷ್ಟು ಏರಿಕೆ ದಾಖಲಿಸಿರುವ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

 ನವದೆಹಲಿ: ಕಳೆದ ಆಗಸ್ಟ್‌ ತಿಂಗಳಲ್ಲಿ ದೇಶದಲ್ಲಿ 1.86 ಲಕ್ಷ ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6.5ರಷ್ಟು ಹೆಚ್ಚಾಗಿದೆ. ಇನ್ನು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಶೇ.10ರಷ್ಟು ಏರಿಕೆ ದಾಖಲಿಸಿರುವ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ಆಗಸ್ಟ್‌ ತಿಂಗಳಲ್ಲಿ ಒಟ್ಟು 1.86 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಆಗಸ್ಟ್‌ನಲ್ಲಿ ದಾಖಲಾದ 1.75 ಲಕ್ಷ ಕೋಟಿ ರು.ಗೆ ಹೋಲಿಸಿದರೆ ಶೇ.6.5ರಷ್ಟು ಹೆಚ್ಚಳವಾಗಿದೆ. ದೇಶೀಯವಾಗಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ (1.37 ಲಕ್ಷ ಕೋಟಿ ರು.) ದಾಖಲಾಗಿದ್ದು ಒಟ್ಟಾರೆ ತೆರಿಗೆ ಸಂಗ್ರಹ ಏರಿಕೆಗೆ ಕಾರಣವಾಗಿದೆ.

ಕರ್ನಾಟಕ ನಂ.1: ಕಳೆದ ವರ್ಷದ ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ 12344 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದ್ದರೆ, ಈ ವರ್ಷ ಅದು 14204 ಕೋಟಿ ರು.ಗೆ ಏರಿಕೆಯಾಗಿದೆ. ಅಂದರೆ ಶೇ.15ರಷ್ಟು ಪ್ರಗತಿ ದಾಖಲಾಗಿದೆ. ಇನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ 26367 ಕೋಟಿ ರು.ಸಂಗ್ರಹಿಸಿದ್ದ ಮಹಾರಾಷ್ಟ್ರ ಈ ಬಾರಿ 28900 ಕೋಟಿ ರು. ಸಂಗ್ರಹದ ಮೂಲಕ ಶೇ.10ರಷ್ಟು ಪ್ರಗತಿ ದಾಖಲಿಸಿದೆ. ಇನ್ನು 3ನೇ ಸ್ಥಾನದಲ್ಲಿರುವ ತಮಿಳುನಾಡು ಕಳೆದ ವರ್ಷ 10181 ಕೋಟಿ ರು. ಸಂಗ್ರಹಿಸಿದ್ದು ಈ ವರ್ಷ 11057 ಕೋಟಿ ರು. ಸಂಗ್ರಹಿಸಿದೆ

ಜಿಎಎಸ್‌ಟಿ ದರ ಕಡಿತ ನಿರೀಕ್ಷೆ: ಆಗಸ್ಟ್‌ನಲ್ಲಿ ವಾಹನ ಖರೀದಿ ಕುಸಿತ

ನವದೆಹಲಿ: ದೀಪಾವಳಿಗೂ ಮುನ್ನ ಜಿಎಸ್‌ಟಿ ಕಡಿತದ ನಿರೀಕ್ಷೆಯಿಂದ ಗ್ರಾಹಕರು ವಾಹನ ಖರೀದಿಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ, ಆಗಸ್ಟ್‌ನಲ್ಲಿ ಭಾರತದ ಪ್ರಮುಖ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಮಾರುತಿ ಸುಜುಕಿಯ ದೇಶಿ ವಾಹನ ವಿತರಣೆ ಶೇ.8, ಹ್ಯುಂಡೈ ಶೇ.11, ಮಹೀಂದ್ರಾ & ಮಹೀಂದ್ರಾ ಶೇ.9 ಹಾಗೂ ಟಾಟಾ ಮೋಟರ್ಸ್‌ನ ವಾಹನ ಖರೀದಿಯಲ್ಲಿ ಶೇ.7ರಷ್ಟು ಕುಸಿತವಾಗಿದೆ. ಪ್ರಸ್ತುತ ಇರುವ 4 ಸ್ತರಗಳ ಜಿಎಸ್‌ಟಿ ವ್ಯವಸ್ಥೆಯನ್ನು 2 ಸ್ತರಗಳಿಗೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಜಾರಿಯಾದರೆ ವಾಹನಗಳ ದರದಲ್ಲಿ ಇಳಿಕೆಯಾಗಲಿದೆ. ಹೀಗಾಗಿ ಗ್ರಾಹಕರು ವಾಹನ ಖರೀದಿಯನ್ನು ಮುಂದೂಡುತ್ತಿದ್ದಾರೆ. 

Read more Articles on