ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸ್ಲ್ಯಾಬ್‌ಗಳ ಸಂಖ್ಯೆ ಕಡಿತದಿಂದ ರಾಜ್ಯಗಳ ಆದಾಯಕ್ಕೆ ₹85,000 ಕೋಟಿಯಿಂದ ₹2.5 ಲಕ್ಷ ಕೋಟಿವರೆಗೆ ನಷ್ಟ ಉಂಟಾಗಲಿದೆ.

 ನವದೆಹಲಿ : ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸ್ಲ್ಯಾಬ್‌ಗಳ ಸಂಖ್ಯೆ ಕಡಿತದಿಂದ ರಾಜ್ಯಗಳ ಆದಾಯಕ್ಕೆ ₹85,000 ಕೋಟಿಯಿಂದ ₹2.5 ಲಕ್ಷ ಕೋಟಿವರೆಗೆ ನಷ್ಟ ಉಂಟಾಗಲಿದೆ. ಹೀಗಾಗಿ, 5 ವರ್ಷಗಳ ಮಟ್ಟಿಗೆ ರಾಜ್ಯಗಳಿಗೆ ಜಿಎಸ್‌ಟಿ ಕೌನ್ಸಿಲ್‌ ನಷ್ಟ ಪರಿಹಾರ ನೀಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

‘ಜಿಎಸ್‌ಟಿ ಸರಳೀಕರಣ ಹಾಗೂ ರಾಜ್ಯಗಳ ಸ್ವಾಯತ್ತತೆ’ಗೆ ಸಂಬಂಧಿಸಿ ಶುಕ್ರವಾರ ದೆಹಲಿಯ ಕರ್ನಾಟಕ ಭವನದಲ್ಲಿ ಎಂಟು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಯಿತು. ಜಿಎಸ್‌ಟಿ ಸುಧಾರಣೆ ವೇಳೆ ಆದಾಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಐಷಾರಾಮಿ ಸರಕು ಮತ್ತು ಸೇವೆಗಳು ಹಾಗೂ ತಂಬಾಕಿನಂಥ ವಸ್ತುಗಳ (ಸಿನ್ ಗೂಡ್ಸ್‌) ಮೇಲೆ ಶೇ.40ರಷ್ಟು ತೆರಿಗೆ ಹಾಕುವ ಪ್ರಸ್ತಾಪವಿದೆ. ಇದರಿಂದ ಬರುವ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಸಭೆಯಲ್ಲಿ ಒತ್ತಾಯಿಸಿವೆ.