ಆದಾಯ ತೆರಿಗೆ : ಬೇಗ ರಿಫಂಡ್‌ ಪಡೆಯುವ ಬಗೆ ಹೇಗೆ!

| N/A | Published : Aug 19 2025, 12:11 PM IST

Income Tax Return 2025

ಸಾರಾಂಶ

ಇನ್‌ಕಂ ಟ್ಯಾಕ್ಸ್‌ ರಿಫಂಡ್‌ನಲ್ಲಿ ವಿಳಂಬ ಆಗುವುದು ಸರ್ವೇ ಸಾಮಾನ್ಯ. ಇದಕ್ಕೆ ಕಾರಣಗಳೇನು, ಬೇಗ ಹಣ ವಾಪಾಸ್‌ ಬರಬೇಕೆಂದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

ಇನ್‌ಕಂ ಟ್ಯಾಕ್ಸ್‌ ರಿಫಂಡ್‌ನಲ್ಲಿ ವಿಳಂಬ ಆಗುವುದು ಸರ್ವೇ ಸಾಮಾನ್ಯ. ಇದಕ್ಕೆ ಕಾರಣಗಳೇನು, ಬೇಗ ಹಣ ವಾಪಾಸ್‌ ಬರಬೇಕೆಂದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.

ಐಟಿ ರಿಟರ್ನ್ ಫೈಲ್‌ ಮಾಡಿ ಬಹಳ ದಿನವಾದರೂ ಹಣ ರಿಫಂಡ್‌ ಆಗಿಲ್ಲ ಎಂದಾಗ ಆತಂಕ ಆಗುವುದು ಸಹಜ. ಎಷ್ಟೋ ಮಂದಿಗೆ ಈ ವಿಳಂಬಕ್ಕೆ ಏನು ಕಾರಣ, ಎಲ್ಲಿ ಎಡವಟ್ಟಾಗಿರಬಹುದು ಎಂಬುದು ತಿಳಿಯುವುದಿಲ್ಲ. ಅದಕ್ಕೆ ಕಾರಣಗಳು ಹಲವಿವೆ.

1. ಬ್ಯಾಂಕ್‌ ವಿವರ ತಪ್ಪಾಗಿರಬಹುದು

ಎಷ್ಟೋ ಸಲ ಐಟಿ ರಿಟರ್ನ್‌ ಫೈಲ್‌ ಮಾಡುವ ಬ್ಯಾಂಕ್‌ನ ವಿವರಗಳನ್ನೇ ತಪ್ಪಾಗಿ ನಮೂದಿಸುವುದುಂಟು. ಇದರಲ್ಲಿ ಒಂದು ಅಂಕಿ ಅತ್ತಿತ್ತ ಆದರೂ ಹಣ ವಾಪಾಸ್‌ ಬರೋದಕ್ಕೆ ತಡೆಯಾಗುತ್ತದೆ. ಹೀಗಾಗಿ ಐಟಿ ರಿಟರ್ನ್‌ ಫೈಲ್ ಮಾಡುವ ಮೊದಲು ಬ್ಯಾಂಕ್‌ ವಿವರಗಳನ್ನು ಎರಡೆರಡು ಬಾರಿ ಚೆಕ್‌ ಮಾಡಿ.

2. ವಿವರ ತಾಳೆ ಆಗದಿರಬಹುದು

ಫಾರ್ಮ್‌ 26 ಎಎಸ್‌ನಲ್ಲಿ ನಿಮ್ಮ ಸಂಬಳದಲ್ಲಿ ಕಡಿತ ಮಾಡಲಾದ ಟಿಡಿಎಸ್‌ ಮೊತ್ತ, ನಿಮ್ಮಿಂದ ಟ್ಯಾಕ್ಸ್‌ ಪಾವತಿಯಾದ ಮೊತ್ತ ಇತ್ಯಾದಿ ವಿವರಗಳು ಇರುತ್ತವೆ. ಆದರೆ ಇದರಲ್ಲಿರುವ ವಿವರಕ್ಕೂ ನಿಮ್ಮ ಐಟಿ ರಿಟರ್ನ್‌ ಫಾರ್ಮ್‌ನಲ್ಲಿರುವ ವಿವರಗಳಿಗೂ ತಾಳೆಯಾಗದಿದ್ದರೆ ಹಣ ಬರುವುದು ತಡವಾಗಬಹುದು.

3. ಐಟಿ ರಿಟರ್ನ್‌ ಸಮಯದಲ್ಲಿ ವಿವರ ಬಿಟ್ಟು ಹೋಗಿರಬಹುದು

ಎಷ್ಟೋ ಸಲ ಅರಿವಿಗೆ ಬರದಂತೆ ಐಟಿ ರಿಟರ್ನ್‌ ಫಾರ್ಮ್‌ ಭರ್ತಿ ಮಾಡುವಾಗ ಯಾವುದೋ ವಿವರ ಸೇರಿಸಲು, ಡಾಕ್ಯುಮೆಂಟ್‌ ಅಟ್ಯಾಚ್‌ ಮಾಡಲು ಬಿಟ್ಟು ಹೋಗಿರುತ್ತದೆ, ವೆರಿಫಿಕೇಶನ್‌ ಅಥವಾ ಪರಿಶೀಲನೆಯ ಹಂತದಲ್ಲೂ ಯಾವುದೋ ಸ್ಟೆಪ್‌ ತಪ್ಪಿ ಹೋಗಿರಬಹುದು.

4. ಅನುಮಾನಾಸ್ಪದ ವಹಿವಾಟು

ಅನುಮಾನಾಸ್ಪದವಾದ ದೊಡ್ಡ ಮೊತ್ತದ ಹಣದ ವ್ಯವಹಾರ ನಿಮ್ಮ ಅಕೌಂಟಿನಲ್ಲಿ ಕಂಡುಬಂದಿದ್ದರೆ ಅದರ ಪರಿಶೀಲನೆಗೆ ಸಮಯ ಹಿಡಿಯಬಹುದು.

5. ವಿವರವಾದ ಪರಿಶೀಲನೆ

ಕೆಲವು ಐಟಿಆರ್‌ ಫೈಲ್‌ಗಳಿಗೆ ವಿವರವಾದ ಪರಿಶೀಲನೆಯ ಅಗತ್ಯವಿರುತ್ತವೆ. ಅಂಥಾ ಸನ್ನಿವೇಶಗಳಲ್ಲಿ ಹಣದ ವಾಪಾಸಾತಿಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ನಾವೇನು ಮಾಡಬಹುದು?

1. ಆದಾಯ ತೆರಿಗೆ ಇಲಾಖೆಯ ಟ್ಯಾಕ್ಸ್‌ ಇ-ಫೈಲಿಂಗ್‌ ವೆಬ್‌ಸೈಟಿನಲ್ಲಿ ನಿಮ್ಮ ರಿಫಂಡ್‌ ಸ್ಟೇಟಸ್‌ ಅನ್ನು ಪರಿಶೀಲನೆ ಮಾಡಿ.

2. ಆದಾಯ ತೆರಿಗೆ ರಿಫಂಡ್‌ ಫಾರ್ಮ್‌ನ ವೆರಿಫಿಕೇಶನ್‌ ಅಥವಾ ಪರಿಶೀಲನೆ ಆಗಿದೆಯೇ ಎಂದು ನೋಡಿ. ಈ ಪರಿಶೀಲನೆ ಬಳಿಕವೇ ಮರುಪಾವತಿ ಪ್ರಕ್ರಿಯೆ ಶುರುವಾಗುತ್ತದೆ.

3. ಫಾರ್ಮ್‌ 26ಎಎಸ್‌ ಮತ್ತು ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್ (ಎಐಎಸ್‌) ಗಮನಿಸಿ. ಇವೆರಡಲ್ಲಿರುವ ಮಾಹಿತಿಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯಾ ಅನ್ನೋದನ್ನು ಚೆಕ್‌ ಮಾಡಿ.

4. ನಿಮ್ಮಿಂದ ಸ್ಪಷ್ಟೀಕರಣ ಕೇಳಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್‌ ಬಂದಿದೆಯೇ ಎಂದು ನೋಡಿ, ಹಾಗೇನಾದರೂ ಬಂದಿದ್ದಲ್ಲಿ ಕೂಡಲೇ ಅದಕ್ಕೆ ಉತ್ತರ ಕಳುಹಿಸಿ.

5. ಏನಾದರೂ ಸಮಸ್ಯೆ ಇದ್ದರೆ 1800-103-0025ಗೆ ಕರೆ ಮಾಡಿ ಆನ್‌ಲೈನ್‌ನಲ್ಲಿ ದೂರು ನೀಡಬಹುದು.

ಬೇಗ ಮರುಪಾವತಿ ಹಣ ಪಡೆಯುವ ಬಗೆ ಹೇಗೆ?

- ಕೊನೆಯ ಹಂತದವರೆಗೆ ಕಾಯದೆ ಬೇಗ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡಿ.

- ಒಂದೋ ಸ್ವಂತವಾಗಿ ಅಥವಾ ಸರಿಯಾದ ಮಾರ್ಗದರ್ಶನ ಪಡೆದು ಅಥವಾ ಪರಿಣತರಿಂದ ಸರಿಯಾದ ರೀತಿಯಲ್ಲಿ ಫಾರ್ಮ್‌ ತುಂಬಿರಿ.

- ಐಟಿಆರ್‌ ಫೈಲ್‌ ಮಾಡುವ ಮೊದಲು ಎರಡೆರಡು ಸಲ ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ಸಂಖ್ಯೆ, ಬ್ಯಾಂಕ್‌ ವಿವರಗಳನ್ನು ಚೆಕ್‌ ಮಾಡಿ.

Read more Articles on