ಸಾರಾಂಶ
ಕ್ರಾಂತಿಕಾರಕ ಯುಪಿಐ 3.0 ಜಾರಿಗೆ ಎನ್‌ಪಿಸಿಐ ಸಿದ್ಧತೆ
ಅಕ್ಟೋಬರ್ ತಿಂಗಳಲ್ಲಿ ಹೊಸ ಸೌಲಭ್ಯ ಜಾರಿ ಸಾಧ್ಯತೆ- ಟೀವಿ ಶುಲ್ಕ ಟೀವಿಯಿಂದ, ಪಾರ್ಕಿಂಗ್ ಶುಲ್ಕ ಕಾರಿಂದ ಪಾವತಿಇದಕ್ಕಾಗಿ ಗ್ರಾಹಕರು ಫೋನ್ ಬಳಸುವುದೇ ಬೇಕಿಲ್ಲ
ನವದೆಹಲಿ: ಮೊಬೈಲ್ ಮೂಲಕ ಟೀವಿ ಚಂದಾಚಾರಿಕೆ ಶುಲ್ಕ, ಕಾರಿನ ಪಾರ್ಕಿಂಗ್ ಶುಲ್ಕ ಪಾವತಿಸುವುದು ಸಾಮಾನ್ಯ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಮೊಬೈಲ್ ಗೊಡವೆ ಬೇಕಿಲ್ಲ. ತಮ್ಮ ಶುಲ್ಕವನ್ನು ಟೀವಿ, ಫ್ರಿಜ್, ಕಾರುಗಳೇ ಸ್ವತಃ ಪಾವತಿಸಲಿವೆ!ಹೌದು. ದೇಶದಲ್ಲಿ ಡಿಜಿಟಲ್ ಪಾವತಿಯಲ್ಲಿ ಹೊಸ ಕ್ರಾಂತಿ ಮಾಡಿರುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಡಲು ಸಜ್ಜಾಗಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೊಸ ತಲೆಮಾರಿನ ಯುಪಿಐ 3.0 ಅಭಿವೃದ್ಧಿಪಡಿಸಿದೆ. ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಮೊಬೈಲ್ ಬಳಸದೆ ಟೀವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಕಾರು, ಸ್ಮಾರ್ಟ್ ವಾಚ್‌ಗಳಂತಹ ಸ್ಮಾರ್ಟ್ ಡಿವೈಸ್ ಮೂಲಕವೂ ಯುಪಿಐ ಮೂಲಕ ಹಣದ ವಹಿವಾಟು ಸಾಧ್ಯವಾಗಲಿದೆ. ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ)- ರೆಡಿ ಯುಪಿಐ ಆವೃತ್ತಿ (ಯುಪಿಐ 3.0)ಯು ಈ ಕ್ರಾಂತಿಕಾರಕ ಬದಲಾವಣೆಯನ್ನು ಸಾಧ್ಯವಾಗಿಸಲಿದೆ.
ಹೇಗೆ ಕೆಲಸ ಮಾಡುತ್ತೆ?:ಟೀವಿ, ಫ್ರಿಡ್ಜ್ ಸೇರಿ ನಿಮ್ಮ ಪ್ರತಿ ಸ್ಮಾರ್ಟ್ ಡಿವೈಸ್‌ಗೆ ಪ್ರತ್ಯೇಕ ಯುಪಿಐ ಐಡಿ ನೀಡಲಾಗುತ್ತದೆ. ಇದು ನಿಮ್ಮ ಮೂಲ ಯುಪಿಐ ಖಾತೆ ಜತೆಗೆ ಜೋಡಣೆಗೊಂಡಿರುತ್ತದೆ. ಬಳಕೆದಾರರು ಈ ಸ್ಮಾರ್ಟ್ ಡಿವೈಸ್‌ಗಳ ಮೂಲಕವೇ ಹಣ ಪಾವತಿಗೆ ಒಂದು ಬಾರಿಯ ಅನುಮತಿ (ಒನ್ ಟೈಂ ಪರ್ಮಿಷನ್) ನೀಡಿದರೆ ಸಾಕು. ಪ್ರತಿ ತಿಂಗಳು ನೀವು ನೀಡಬೇಕಿರುವ ಚಂದಾದಾರಿಕೆ, ಪಾರ್ಕಿಂಕ್ ಶುಲ್ಕ ಗ್ರಾಹಕರ ಹಸ್ತಕ್ಷೇಪವಿಲ್ಲದೆ ನಿಮ್ಮ ಸ್ಮಾರ್ಟ್ ಡಿವೈಸ್‌ಗಳೇ ಪಾವತಿಸುತ್ತವೆ.
ಈ ಹೊಸ ವ್ಯವಸ್ಥೆಯಲ್ಲಿ ‘ಯುಪಿಐ ಸರ್ಕಲ್’ ಎನ್ನುವ ಸೌಲಭ್ಯ ಕಲ್ಪಿಸುವ ನಿರೀಕ್ಷೆ ಇದ್ದು, ಇದರ ಮೂಲಕ ಬಳಕೆದಾರರು ಸ್ಮಾರ್ಟ್ ಗೆಜೆಟ್‌ಗಳ ಮೂಲಕ ಪಾವತಿಯಾಗುವ ಹಣಕ್ಕೆ ಗರಿಷ್ಠ ಮಿತಿ ಹಾಕಬಹುದಾಗಿದೆ.ಮೂಲಗಳ ಪ್ರಕಾರ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ನಡೆಯಲಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್-2025ರಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.