ಜಿಎಸ್‌ಟಿ - ಯುಪಿಐ ಪೇಮೆಂಟ್ ಗೊಂದಲಕ್ಕೆ ಯಾರು ಹೊಣೆ?

| N/A | Published : Jul 24 2025, 11:46 AM IST

Latest UPI features

ಸಾರಾಂಶ

ಯು.ಪಿ.ಐ ಪೇಮೆಂಟ್ ವ್ಯವಸ್ಥೆಯನ್ನು ವರ್ತಕರನ್ನೂ ಒಳಗೊಂಡು ದೇಶದ ಎಲ್ಲ ಪ್ರಜೆಗಳಿಗೂ ‘ಉಚಿತವಾಗಿ’ ನೀಡುತ್ತಾ, ಈ ವ್ಯವಸ್ಥೆಯ ನಿರ್ವಹಣೆಗೆ ಪ್ರತಿ ವರುಷ ಸಾವಿರಾರು ಕೋಟಿ ವೆಚ್ಚ ಮಾಡುತ್ತಿರುವ ಮೋದಿ ಸರ್ಕಾರ ಈ ಕುತಂತ್ರವನ್ನು ಮಾಡುತ್ತದೆಯೇ? ಯೋಚಿಸಿ.

-ಎಸ್.ವಿಶ್ವನಾಥ ಭಟ್, ಆರ್ಥಿಕ ತಜ್ಞರು.

2015ರಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ‘ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯಗಳನ್ನು’ ಒದಗಿಸುವ ಮೂಲಕ ಧನಾತ್ಮಕ ಪರಿವರ್ತನೆ ತರಲು ₹1.13 ಲಕ್ಷ ಕೋಟಿ ಹೂಡಿಕೆಯೊಂದಿಗೆ, ಡಿಜಿಟಲ್ ಇಂಡಿಯಾ ಯೋಜನೆಯನ್ನು ಆರಂಭಿಸಿದರು. ಇದರಿಂದಾಗಿ ಭಾರತ ಇಂದು ಡಿಜಿಟಲ್ ವ್ಯವಸ್ಥೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ತಕ್ಷಣವೇ ಹಣವನ್ನು ಕಳುಹಿಸಬಹುದಾದ, ಸ್ವೀಕರಿಸಬಹುದಾದ ಮತ್ತು ಸುಲಭವಾದ ಡಿಜಿಟಲ್ ವ್ಯವಸ್ಥೆ ಭಾರತದ ಸಾಧನೆಗಳಲ್ಲಿ ಮಹತ್ವದ ಮೈಲಿಗಲ್ಲು.

ಪರಿಣಾಮ: ಆರ್ಥಿಕ ವ್ಯವಹಾರಗಳು ಸರಳೀಕೃತಗೊಂಡಿದ್ದು ಆರ್ಥಿಕ ಸೇರ್ಪಡೆ ಹೆಚ್ಚಾಗಿದೆ. ದೇಶದ 49.1 ಕೋಟಿ ಜನ ಮತ್ತು 6.5 ಕೋಟಿ ವ್ಯಾಪಾರಿಗಳು ಈ ವ್ಯವಸ್ಥೆಯನ್ನು ಬಳಸುತ್ತಿದ್ದು, ಡಿಜಿಟಲ್ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭವಾಗಿದೆ. ಜಾಗತಿಕ ನೈಜ-ಸಮಯದ ಪಾವತಿಗಳಲ್ಲಿ ಸುಮಾರು ಶೇಕಡ 50ರಷ್ಟು ಕೊಡುಗೆ ಭಾರತ ನೀಡುತ್ತಿದೆ. ದೇಶದಲ್ಲಿ ಯುಪಿಐ ಬಳಕೆಯಲ್ಲಿ ಕರ್ನಾಟಕ ಶೇ 7.73 ಪಾಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

‘ಒಂದು ದೇಶ ಒಂದು ತೆರಿಗೆ’ ಸಿದ್ಧಾಂತದಲ್ಲಿ 1 ಜುಲೈ 2017ರಂದು ಜಾರಿಗೊಂಡ ಜಿಎಸ್‌ಟಿ ವ್ಯವಸ್ಥೆ ಒಂಬತ್ತನೇ ವರುಷಕ್ಕೆ ದಾಪುಗಾಲು ಹಾಕಿದೆ. Delloiitte ಎಂಬ ಬಹುರಾಷ್ಟ್ರೀಯ professional service ನೆಟ್‌ವರ್ಕ್ ಸಂಸ್ಥೆಯ ಜಿಎಸ್‌ಟಿ@8 ಎಂಬ ವರದಿಯಲ್ಲಿ ‘block buster for GST@8’ ಎಂದು ಪ್ರಶಂಸಿಸಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಅದರೂ, ಜಿಎಸ್‌ಟಿ ವ್ಯವಸ್ಥೆ ಮತ್ತು ಡಿಜಿಟಲ್ ವಹಿವಾಟಿನಲ್ಲಿ, ಮೊದಲ ಬಾರಿಗೆ ಕರ್ನಾಟಕದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಜಿ.ಎಸ್.ಟಿ ಪಾವತಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ದೊಡ್ಡ ಮಟ್ಟದಲ್ಲಿ ಜಿ.ಎಸ್.ಟಿ evasion notice ಅನ್ನು ಜಾರಿಗೊಳಿಸಲಾಗಿದೆ. ಇವರಲ್ಲಿ ಬಹುಪಾಲು ಸಣ್ಣ ವ್ಯಾಪಾರಿಗಳೇ!

ವಾಣಿಜ್ಯ ಇಲಾಖೆ ನೀಡುತ್ತಿರುವ ಕಾರಣಗಳೆಂದರೆ:

1)ವರ್ತಕರ GSTR-3B ಮತ್ತು UPI ಪೇಮೆಂಟ್ ಡೇಟಗಳ ನಡುವೆ ವ್ಯತ್ಯಾಸ.

2)ಡಿಜಿಟಲ್ ಪೇಮೆಂಟ್ ವಹಿವಾಟುಗಳನ್ನು ವರ್ತಕರು ಕಡಿಮೆ ವರದಿ ಮಾಡಿರುವುದು.

ಪರಿಣಾಮ, ಕರ್ನಾಟಕದಲ್ಲಿ ಮೊದಲ ಬಾರಿಗೆ ಸಣ್ಣ ವರ್ತಕರಿಂದ ‘ಡಿಜಿಟಲ್ ಪೇಮೆಂಟೇ ಬೇಡ’ ಎನ್ನುವ ಪರಿಸ್ಥಿತಿಯ ನಿರ್ಮಾಣವಾಗಿದೆ!

ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಸರ್ಕಾರ ಆಪಾದಿಸುತ್ತಿದೆ, ಹೌದೇ?

ವರ್ತಕರಿಗೆ ವಹಿವಾಟು ಸುಲಭವಾಗಲಿ, ಜನಸಾಮಾನ್ಯರ ದೈನಂದಿನ ಜೀವನ ಸುಲಲಿತವಾಗಲೆಂಬ ಸದುದ್ದೇಶದಿಂದ ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಯು.ಪಿ.ಐ ಪೇಮೆಂಟ್ ವ್ಯವಸ್ಥೆಯನ್ನು ವರ್ತಕರನ್ನೂ ಒಳಗೊಂಡು ದೇಶದ ಎಲ್ಲ ಪ್ರಜೆಗಳಿಗೂ ‘ಉಚಿತವಾಗಿ’ ನೀಡುತ್ತಾ, ಈ ವ್ಯವಸ್ಥೆಯ ನಿರ್ವಹಣೆಗೆ ಪ್ರತಿ ವರುಷ ಸಾವಿರಾರು ಕೋಟಿ ವೆಚ್ಚ ಮಾಡುತ್ತಿರುವ ಮೋದಿ ಸರ್ಕಾರ ಈ ಕುತಂತ್ರವನ್ನು ಮಾಡುತ್ತದೆಯೇ? ಯೋಚಿಸಿ.

ಸತ್ಯಾಂವೇನು?: ಕರ್ನಾಟಕದ ಆರ್ಥಿಕತೆ ಹಣಕಾಸಿನ ಒತ್ತಡವನ್ನು ಎದುರಿಸುತ್ತಿದೆ. 2022-23ರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಮಾಡಿದ ₹44,549 ಕೋಟಿ ಸಾಲಕ್ಕಿಂತ ಹೆಚ್ಚು ಹಣವನ್ನು ಅಂದರೆ ₹45,600 ಕೋಟಿಯನ್ನು 2025-26ರಲ್ಲಿ ಸಾಲದ ಮೇಲಿನ ಬಡ್ಡಿಯಾಗಿ ಕಾಂಗ್ರೆಸ್ ಸರ್ಕಾರ ಪಾವತಿ ಮಾಡುತ್ತಿದೆ! ಕಳೆದ ಎರಡು ವರ್ಷಗಳಿಂದ ಸತತವಾಗಿ ಸಾಲದ ಎತ್ತುವಳಿ ಲಕ್ಷ ಕೋಟಿ ರು. ಮೀರಿದ್ದರೂ ಸಹ ಹಣಕಾಸಿನ ಒತ್ತಡ ಕಡಿಮೆಯಾಗಿಲ್ಲ. ಹಾಲು, ನೀರು, ಮರಣ ಪ್ರಮಾಣ ಪತ್ರದ ತನಕ ಎಲ್ಲ ಸರಕುಗಳು ಮತ್ತು ಸೇವೆಗಳ ಮೇಲೆ ತೆರಿಗೆ ಮತ್ತು ಶುಲ್ಕಗಳಲ್ಲಿ ಭಾರೀ ಏರಿಕೆ. ತೆರಿಗೆ ಸಂಗ್ರಹಣೆಗೆ ಒತ್ತಡದಿಂದಾಗಿ, ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ದೊಡ್ಡ ಮಟ್ಟದಲ್ಲಿ ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದೆ! ಜಿಗುಪ್ಸೆಯೆಂದರೆ, ಅಪವಾದ ಮೋದಿ ಸರ್ಕಾರದ ಮೇಲೆ!

ಸಣ್ಣ ವ್ಯಾಪಾರಸ್ಥರು, GSTಯಿಂದ ವ್ಯಾಪಾರಕ್ಕೆ ತೊಂದರೆಯಾಗದಂತೆ ನಿರ್ವಹಿಸುವುದು ಹೇಗೆ?

1)ಪ್ರತಿ ತಿಂಗಳು ನಿಮ್ಮ ಸಮಗ್ರ ವಹಿವಾಟನ್ನು ಗಮನಿಸಿ.

2)ಜಿ.ಎಸ್.ಟಿ ಮಿತಿ ದಾಟಬಹುದು ಎಂದೆನಿಸಿದಾಗ, ಕೂಡಲೇ ಜಿಎಸ್‌ಟಿ ನೋಂದಾಯಿಸಿ.

3)GSTR-1, GSTR-3B returnsಗಳನ್ನು NIL ಇದ್ದರೂ ನಿಯಮಿತವಾಗಿ file ಮಾಡಿ.

4)Books of Accounts ಮತ್ತು ನಗದು ಹಾಗೂ ಡಿಜಿಟಲ್ ಪೇಮೆಂಟ್‌ಗಳ ಮೂಲಕ ವಹಿವಾಟುಗಳ ನಡುವಿನ mismatch-gapಅನ್ನು ಹೋಗಲಾಡಿಸಿ.

ಸಣ್ಣ ವ್ಯಾಪಾರಿಗಳ ಸಮಸ್ಯೆಗಳ ಸ್ಪಂದನೆಗಾಗಿ ಜುಲೈ 2ನೇ ವಾರದಲ್ಲಿ ನಡೆದ ಜಿಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಕಡ್ಡಾಯ ಜಿಎಸ್‌ಟಿ ನೋಂದಣಿಯ ವಾರ್ಷಿಕ ವಹಿವಾಟಿನ ಮಿತಿಯನ್ನು ₹40 ಲಕ್ಷದಿಂದ ₹50 ಲಕ್ಷಕ್ಕೆ ಹಾಗೂ ಕಾಂಪೊಸಿಟ್ ಯೋಜನೆಯಡಿ (ರಾಜಿ ಪದ್ಧತಿ) ವಾರ್ಷಿಕ ವಹಿವಾಟಿನ ಮಿತಿಯನ್ನು ₹1.5 ಕೋಟಿಯಿಂದ ₹2 ಕೋಟಿಗೆ ಏರಿಸಲಾಗಿದೆ. tax returns ಫೈಲ್ ಮಾಡುವಲ್ಲಿ penalty/ late feeಯಲ್ಲೂ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ.

ಸರ್ಕಾರದಿಂದ ಒತ್ತಡದಲ್ಲಿರುವ ಅಧಿಕಾರಿಗಳಿಂದ ಅಥವಾ ರಾಜ್ಯ ಸರ್ಕಾರದಿಂದಲೇ ಆತಂಕ ಸೃಷ್ಟಿಯಾದರೂ, ಯುಪಿಐ ನಂತಹ ಉಚಿತ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಬಾರದು. ಏಕೆಂದರೆ, ಡಿಜಿಟಲ್ ಪರಿವರ್ತನೆಯಲ್ಲಿ ನಿಮ್ಮ, ನಿಮ್ಮ ಕುಟುಂಬದ ಹಾಗೂ ಸಮಗ್ರ ದೇಶದ ಭವಿಷ್ಯ ಅಡಗಿದೆ.

Read more Articles on