ಸಾರಾಂಶ
ಮಧುಮೇಹಿಗಳಿಗೆ ಅನುಕೂಲಕರವಾದ ಜೋಳದ ರೊಟ್ಟಿ, ರಾಗಿ ರೊಟ್ಟಿ ಹೆಚ್ಚು ದಿನ ಸ್ಟಾಕ್ ಇಡಲು ಅನುಕೂಲ ಆಗುವಂತಾದರೆ ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದು ಸ್ವತಃ ಡಯಾಬಿಟೀಸ್ ಬಾಧಿತರೊಬ್ಬರು ಯೋಚಿಸಿದಾಗ ಹುಟ್ಟಿದ ಉದ್ಯಮವೇ ಸ್ವಾದ್ ನಂದಿನಿ ಹೆಸರಿನ ಖಡಕ್ ರೊಟ್ಟಿಗಳು.
ರೊಟ್ಟಿ ಉದ್ಯಮಕ್ಕೆ ಕಾಲಿಡಲು ಸ್ಫೂರ್ತಿ । ಉತ್ಪನ್ನ ಮಾರಲು ರಿಲಯನ್ಸ್ ಜತೆಗೂ ಒಪ್ಪಂದಕ್ಕೆ ಸಹಿ ಹಾಕಿದೆ ಸಂಸ್ಥೆ
ಮಧುಮೇಹಿಗಳಿಗೆ ಅನುಕೂಲಕರವಾದ ಜೋಳದ ರೊಟ್ಟಿ, ರಾಗಿ ರೊಟ್ಟಿ ಎಲ್ಲಾ ಕಡೆ ಸಿಗೋದಿಲ್ಲ. ಮನೆಯಲ್ಲಿ ಹೆಚ್ಚು ದಿನ ಸ್ಟಾಕ್ ಇಡಲು ಅನುಕೂಲ ಆಗುವಂತಾದರೆ ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದು ಸ್ವತಃ ಡಯಾಬಿಟೀಸ್ ಬಾಧಿತರೊಬ್ಬರು ಯೋಚಿಸಿದಾಗ ಹುಟ್ಟಿದ ಉದ್ಯಮವೇ ಸ್ವಾದ್ ನಂದಿನಿ ಹೆಸರಿನ ಖಡಕ್ ರೊಟ್ಟಿಗಳು.
ಬೀದರ್‌ನ ಬಲಭೀಮ ಬಸುಳೆ ಅವರು ಮಹಾರಾಷ್ಟ್ರದ ಲಾತೂರ್‌ನಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. 2010ರಿಂದ ಐದು ವರ್ಷಗಳ ಕಾಲ ಲಾತೂರಿನಲ್ಲಿ ಉದ್ಯೋಗ ಮಾಡುವಾಗಲೇ ಅವರಿಗೆ ಡಯಾಬಿಟೀಸ್ ಕಾಣಿಸಿಕೊಂಡಿತು. ಆದರೆ, ಅವರಿಗೆ ಬೇಕಾದ ಜೋಳದ ರೊಟ್ಟಿ ಅಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಊರಿಂದ ಖಡಕ್ ರೊಟ್ಟಿ ಒಯ್ಯುತ್ತಿದ್ದರು.
ಮತ್ತೊಂದು ಕಡೆ ಅವರ ತಾಯಿ ತಯಾರಿಸುವ ಉಪ್ಪಿನಕಾಯಿ ಮಾರುವುದನ್ನು ಅಭ್ಯಾಸವಾಗಿಟ್ಟುಕೊಂಡಿದ್ದರು. ಅವರ ತಾಯಿ ಸುಮಾರು 15 ವರ್ಷಗಳಿಂದ ಉಪ್ಪಿನಕಾಯಿ ತಯಾರಿಸಿ ಯಾವುದೇ ಬ್ರ್ಯಾಂಡಿಂಗ್ ಇಲ್ಲದೆ ಮಾರುತ್ತಿದ್ದರು. ಅದೇ ಉತ್ಪನ್ನವನ್ನ ಬಲಭೀಮ ಅವರು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿ ದುಡ್ಡು ಸೇರಿಸತೊಡಗಿದರು. ಉಪ್ಪಿನ ಕಾಯಿ ಮಾರಿ ಬದುಕಬಹುದು ಎಂಬ ವಿಶ್ವಾಸ ಸಿಗುತ್ತಿದ್ದಂತೆ ಕೆಲಸ ಬಿಟ್ಟು 2015ರಲ್ಲಿ ಬೀದರ್‌ಗೆ ಹಿಂತಿರುಗಿ ಉಪ್ಪಿನಕಾಯಿ ಮಾರುವುದನ್ನೇ ವೃತ್ತಿಯಾಗಿಸಿಕೊಂಡರು. ಆದರೆ, ಅದರಲ್ಲಿ ಉಳಿವ ಹಣ ಸಾಲದಾಗಿ ಬೇರೆ ಏನಾದರು ಮಾಡೋಣ ಅನ್ನುವಾಗ ನೆನಪಾಗಿದ್ದೆ ಲಾತೂರಲ್ಲಿದ್ದಾಗ ಜೋಳದ ರೊಟ್ಟಿಗಾಗಿ ಪರದಾಡಿದ್ದು.
ರಿಲಯನ್ಸ್‌ಗೂ ರೊಟ್ಟಿ: 2016ರಲ್ಲಿ ಪಿಎಂಇಜಿಪಿ ಯೋಜನೆ ಅಡಿ 10 ಲಕ್ಷ ಸಾಲ ಮಾಡಿ ರೊಟ್ಟಿ ಮಷೀನ್ ತಂದರು. ಇದಕ್ಕೆ ಎರಡೂವರೆ ಲಕ್ಷ ಸಬ್ಸಿಡಿಯನ್ನೂ ಪಡೆದರು. ವರ್ಷದಿಂದ ವರ್ಷಕ್ಕೆ ರೊಟ್ಟಿಗೆ ಬೇಡಿಕೆ ಹೆಚ್ಚತೊಡಗಿತ್ತು. ಮಹಾರಾಷ್ಟ್ರದಲ್ಲಿ ರತನ್ದೀಪ್ ಎಂಬ 150 ಸರಣಿ ಅಂಗಡಿಯಲ್ಲೂ ಇದಕ್ಕೆ ಬೇಡಿಕೆ ಹುಟ್ಟಿತು. 100 ಸರಣಿ ಅಂಗಡಿಗಳುಳ್ಳ ವಿಜೇತದಲ್ಲೂ ಬೇಡಿಕೆ ಬಂತು. ಬಿಗ್ ಬಾಸ್ಕೆಟ್ ಆನ್‌ಲೈನ್ ಅಂಗಡಿಯಲ್ಲೂ ಈಗ ದೊರೆಯುತ್ತಿದೆ.
ಅಲೆಸಲಿಲ್ಲ, ಕಾಡಲಿಲ್ಲ ಕಪೆಕ್: 2022ರಲ್ಲಿ ಕಪೆಕ್ ಸಂಪರ್ಕಿಸಿ ಪಿಎಂಎಫ್‌ಇ ನೆರವಿನಲ್ಲಿ 31 ಲಕ್ಷ ಸಾಲ ಪಡೆದು ಉತ್ಪನ್ನ ಹಾಗೂ ಮಾರಾಟ ವಿಸ್ತರಿಸಿದರು. ಇದಕ್ಕಾಗಿ 14.35 ಲಕ್ಷ ರೂ. ಸಬ್ಸಿಡಿಯನ್ನೂ ಪಡೆದರು. ಸರ್ಕಾರದ ವ್ಯವಸ್ಥೆಯಲ್ಲಿ ಅಲೆಸದೇ ಕಾಡದೇ ಕೆಲಸವಾಗಲ್ಲ ಎಂಬ ಅನುಭವಗಳಿವೆ. ಆದರೆ, ಕಪೆಕ್‌ನಲ್ಲಿ ಆ ರೀತಿ ಆಗಲಿಲ್ಲ. ಯೋಜನಾ ವರದಿ ಕೊಟ್ಟ ಮೂರು ದಿನದಲ್ಲಿ ಮಂಜೂ ರಾಯಿತು. ನಂತರ ಯುನಿಯನ್ ಬ್ಯಾಂಕಿನವರು ವಾರದಲ್ಲಿ ಸಾಲ ನೀಡಿದರು ಎಂದು ಸಂತಸದಿಂದ ಪಿಎಂಎಫ್‌ಎಂಇ ಲಾಭ ವಿವರಿಸಿದರು ಬಲಭೀಮ.
ನಿತ್ಯ 15 ಸಾವಿರ ರೊಟ್ಟಿ ಮಾರಾಟ: ರತನ್ ದೀಪ್ ಅಂಗಡಿಯಲ್ಲಿ ರೊಟ್ಟಿಗೆ ಇರುವ ಬೇಡಿಕೆ - ಗುಣಮಟ್ಟ ಗಮನಿಸಿದ ರಿಲಯನ್ಸ್‌ನಿಂದ ಬಲಭೀಮಗೆ ಕರೆ ಬಂತು. 6 ತಿಂಗಳ ಮಾತುಕತೆ ನಂತರ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ರಿಲಯನ್ಸ್ ಅಂಗಡಿ ಗಳಿಗೆ ರೊಟ್ಟಿ ಪೂರೈಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಮುಂದಿನ 3 ವರ್ಷದ ರಿಲಯನ್ಸ್ ಜೊತೆಗಿನ ಗುತ್ತಿಗೆ ಒಪ್ಪಂದಕ್ಕೆ ಬಲಭೀಮ ಅವರ ಸ್ವಾದ್ ನಂದಿನ ಫುಡ್ಸ್ ಸಹಿ ಹಾಕಿದೆ. ಅದಕ್ಕಾಗಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ರೊಟ್ಟಿ ಉತ್ಪಾದನಾ ಘಟಕ ವನ್ನ ಮೇಲ್ದರ್ಜೆಗೆ ಏರಿಸುತ್ತಿದ್ದಾರೆ. ಈ ಬಾರಿಯ ದಸರಾ ಹೊತ್ತಿಗೆ ಹೊಸ ಘಟಕ ಕೆಲಸ ಆರಂಭಿಸಲಿದೆ.
ಹೊಸ ಘಟಕ ಆರಂಭವಾದರೆ ಪ್ರತಿನಿತ್ಯ 65 ಸಾವಿರ ಜೋಳದ ರೊಟ್ಟಿ ತಯಾ ರಾಗಿ ಮಾರಾಟ ಆಗಲಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಪ್ರತಿ ರಿಲಯನ್ಸ್ ಸ್ಟೋರ್‌ನಲ್ಲೂ ಸ್ವಾದ್ ನಂದಿನಿ ರೊಟ್ಟಿಗಳು ದೊರೆಯಲಿವೆ. ಪ್ರಸ್ತುತ 2 ಕೋಟಿ ರೂ. ವಹಿವಾಟು ನಡೆಸುತ್ತಿರುವ ಸ್ವಾದ್ ನಂದಿನಿಯು ಮುಂದಿನ ಎರಡು ವರ್ಷದಲ್ಲಿ 25 ರಿಂದ 30 ಕೋಟಿ ರೂ.ಗೆ ತನ್ನ ವಹಿವಾಟು ಹೆಚ್ಚಿಸುವ ಗುರಿ ಹಾಕಿಕೊಂಡಿದೆ. ನಮ್ಮದು 100 ಕೋಟಿ ರೂ. ರೊಟ್ಟಿ ಮಾಡುವ ಕಂಪನಿ ಆಗಬೇಕು. ಪ್ರಸ್ತುತ 35 ಜನರಿಗೆ ನೇರ ಉದ್ಯೋಗ ನೀಡಿದ್ದೇವೆ. 100 ಜನರಿಗೆ ಸದ್ಯದಲ್ಲೇ ಉದ್ಯೋಗ ನೀಡುವುದು ನಮ್ಮ ಗುರಿ. ಅಮ್ಮ ಸಾವಿತ್ರಿ, ಎಂಎಸ್ಸಿ ಬಯೋಟೆಕ್ ಪದವೀಧರ ಪತ್ನಿ ಮಯೂರಿ ಹಾಗು ಚಿಕ್ಕಮ್ಮ ಸುನಿತಾ ಅವರು ರೊಟ್ಟಿ ಉತ್ಪಾದನೆ ಕಡೆ ಗಮನ ಕೊಡುತ್ತಾರೆ.
ನಾನು ಇದರ ಮಾರ್ಕೆಟಿಂಗ್ ಕಡೆ ಗಮನ ನೀಡುತ್ತಿದ್ದೇನೆ ಎಂದು ತಮ್ಮ ಕಾರ್ಯ ಚಟು ವಟಿಕೆ, ಗುರಿ ವಿವರಿಸಿದರು ಬಲಭೀಮ ಬಸುಳೆ, ಜೋಳ, ಹಳದಿ ಜೋಳ, ಸಜ್ಜೆ, ರಾಗಿ, ಮುಸುಕಿ ಜೋಳದ ರೊಟ್ಟಿ, ಕೆಂಪು ಅಕ್ಕಿಯಲ್ಲೂ ಖಡಕ್ ರೊಟ್ಟಿ ಮಾಡಿ ಮಾರಲಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳ ಬೇಡಿಕೆ ಈಡೇರಿಸುವುದರಲ್ಲೇ ಆಗುತ್ತಿದೆ. ಹೀಗಾಗಿ ನಮ್ಮದೇ ಪ್ರತ್ಯೇಕ ಆನ್‌ಲೈನ್ ವ್ಯಾಪಾರಕ್ಕೆ ಕೈ ಹಾಕಲು ಆಗಿಲ್ಲ, ಜೊತೆಗೆ ಇದರ ಸಣ್ಣ ಪ್ರಮಾಣದ ಸಾಗಾಣಿಕೆ ಸ್ವಲ್ಪ ಸವಾಲಿನದು. ರಫ್ತು ಮಾಡಲು ಒಂದು ವರ್ಷದವರೆಗೆ ಕೆಡದಂತೆ ಮಾಡಬೇಕು. ಕೆಮಿಕಲ್ ಬಳಸಿ ದರೆ ಇದನ್ನು ಮಾಡಬಹುದು. ಯಾವುದೇ ರಾಸಾಯನಿಕ ಬಳಸದೇ ಮಾಡಬೇಕು ಎಂಬ ಸಂಶೋಧನೆ ನಡೆಸಿದ್ದೇವೆ. ಅದು ಸಕ್ಸಸ್ ಆದರೆ ಮಾತ್ರ ರಫ್ತು ಮಾಡಲು ಯೋಚಿಸು ತ್ತೇವೆ ಎಂದರು ಸ್ವಾದ ನಂದಿನಿಯ ಬಲಭೀಮ ಬಸುಳೆ. ಸ್ವಾದ್ ನಂದಿನಿ ಉತ್ಪನ್ನಗಳಿಗಾಗಿ ಸಂಪರ್ಕಿಸಿ: 9561793999
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.