ಅರ್ಜಿ ಸಲ್ಲಿಸಿದ ನಿಮಿಷದಲ್ಲಿ ತಾತ್ಕಾಲಿಕ ಉದ್ದಿಮೆ ಪರವಾನಗಿ

| N/A | Published : Apr 27 2025, 01:31 AM IST / Updated: Apr 27 2025, 07:37 AM IST

ಸಾರಾಂಶ

ರಾಜಧಾನಿಯಲ್ಲಿ ಇನ್ನು ಉದ್ದಿಮೆ ಆರಂಭಿಸುವುದಕ್ಕೆ ಬೇಕಾದ ಪರವಾನಗಿ ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಕೆಲವೇ ನಿಮಿಷದಲ್ಲಿ ತಾತ್ಕಾಲಿಕ ಉದ್ದಿಮೆ ಪರವಾನಗಿ ನೀಡುವುದಕ್ಕೆ ಬಿಬಿಎಂಪಿಯು ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ಉದ್ದಿಮೆ ಆರಂಭಿಸುವುದಕ್ಕೆ ಬೇಕಾದ ಪರವಾನಗಿ ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಕೆಲವೇ ನಿಮಿಷದಲ್ಲಿ ತಾತ್ಕಾಲಿಕ ಉದ್ದಿಮೆ ಪರವಾನಗಿ ನೀಡುವುದಕ್ಕೆ ಬಿಬಿಎಂಪಿಯು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸದ್ಯ ಬಿಬಿಎಂಪಿಯಲ್ಲಿ ಉದ್ದಿಮೆ ಪರವಾನಗಿ ಪಡೆಯುವುದಕ್ಕೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿಕೆ ಮಾಡಿದ ಬಳಿಕ ಸಂಬಂಧಪಟ್ಟ ಬಿಬಿಎಂಪಿಯ ಅಧಿಕಾರಿಗಳು ಸಲ್ಲಿಸಿರುವ ಎಲ್ಲ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ. ಬಳಿಕ ಲೋಪದೋಷಗಳು ಕಂಡು ಬಂದರೆ, ಅವುಗಳನ್ನು ಸರಿಪಡಿಸಲು ಸೂಚನೆ ನೀಡುತ್ತಾರೆ. ವ್ಯಾಪಾರ ನಡೆಸುವ ಕಟ್ಟಡ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಎಲ್ಲವೂ ನಿಯಮಾನುಸಾರವಾಗಿದ್ದರೆ ಮಾತ್ರ ಬಿಬಿಎಂಪಿ ಅಧಿಕಾರಿಗಳಿಂದ ಪರವಾನಗಿಗೆ ಅನುಮೋದನೆ ಲಭಿಸಲಿದೆ. ಆ ಬಳಿಕ ಉದ್ದಿಮೆ ಆರಂಭಿಸಬಹುದಾಗಿದೆ.

ಇದರಿಂದ ಸಾಕಷ್ಟು ಉದ್ದಿಮೆ ಆರಂಭಿಸುವವರಿಗೆ ತೊಂದರೆ ಆಗುತ್ತಿದ್ದು, ಕಾಲವಿಳಂಬವಾಗಲಿದೆ. ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಬಿಬಿಎಂಪಿಯು ಇದೀಗ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ತಕ್ಷಣ ತಾತ್ಕಲಿಕ ಉದ್ದಿಮೆ ಪರವಾನಗಿಯನ್ನು ಮಂಜೂರು ಮಾಡಲಿದೆ. ಈ ಪರವಾನಗಿ ಆಧಾರಿಸಿ ಉದ್ದಿಮೆ ನಡೆಸಬಹುದಾಗಿದೆ.ಆ ಬಳಿಕ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅರ್ಜಿದಾರರು ಸಲ್ಲಿಕೆ ಮಾಡಿದ ದಾಖಲೆ ಹಾಗೂ ವಾಸ್ತವ ಸ್ಥಿತಿ ಸರಿಯಾಗಿದ್ದರೆ ಮಾತ್ರ ಅಂತಿಮವಾಗಿ ಉದ್ದಿಮೆ ಪರವಾನಗಿ ಮಂಜೂರು ಮಾಡಲಿದ್ದಾರೆ. ಇಲ್ಲವಾದರೆ, ಉದ್ದಿಮೆ ಬಂದ್‌ ಮಾಡಲಿದ್ದಾರೆ. ಅರ್ಜಿ ಸಲ್ಲಿಕೆ ವೇಳೆಯಲ್ಲಿಯೇ ಅರ್ಜಿದಾರರಿಂದ ಈ ನಿಬಂಧನೆಗೆ ಒಪ್ಪಿಗೆ ಪಡೆದುಕೊಂಡೇ ತಾತ್ಕಾಲಿಕ ಉದ್ದಿಮೆ ಪರವಾನಗಿ ನೀಡಲಾಗಿರುತ್ತದೆ.

ಕಿರುಕುಳ, ಅಲೆದಾಟಕ್ಕೆ ಬ್ರೇಕ್‌:

ಕೆಲವು ಕಡೆ ಅರ್ಜಿ ಸಲ್ಲಿಕೆ ಮಾಡಿದರೂ ಅಧಿಕಾರಿಗಳು ಅನಾಗತ್ಯವಾಗಿ ಉದ್ದಿಮೆ ಪರವಾನಗಿ ನೀಡದೇ ಕಿರುಕುಳ ನೀಡುತ್ತಾರೆ. ಜತೆಗೆ, ಕಚೇರಿಗೆ ಅಲೆದಾಡಿಸುತ್ತಾರೆ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ತಾತ್ಕಾಲಿಕ ಉದ್ದಿಮೆ ಪರವಾನಗಿ ಮಂಜೂರಾದ ನಂತರ 3 ತಿಂಗಳು ಕಾಲಾವಕಾಶ ಇರಲಿದ್ದು, ಅದರೊಳಗಡೆ ಶ್ವಾಶತ ಪರವಾನಗಿ ಪಡೆಯಬೇಕು. ಬಿಬಿಎಂಪಿಯ ಈ ಹೊಸ ವ್ಯವಸ್ಥೆ ಜಾರಿಯಿಂದ ಅರ್ಜಿದಾರರಿಗೆ ಅಲೆದಾಟ ತಪ್ಪಲಿದೆ.

ಉದ್ದಿಮೆ ಪರವಾನಗಿ ಸಂಖ್ಯೆಯೂ ಹೆಚ್ಚಳ:

ಸಿಲಿಕಾನ್‌ ಸಿಟಿಯಲ್ಲಿ ಲಕ್ಷಾಂತರ ಸಂಖ್ಯೆಯ ಉದ್ದಿಮೆಗಳಿದ್ದರೂ ಬಿಬಿಎಂಪಿಯಿಂದ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದುಕೊಂಡು ನಡೆಸುತ್ತಿರುವವ ಸಂಖ್ಯೆ 60 ರಿಂದ 70 ಸಾವಿರ ಮಾತ್ರ ಇದೆ. ಬಿಬಿಎಂಪಿಯು ಜಾರಿಗೊಳಿಸುವುದಕ್ಕೆ ಮುಂದಾಗಿರುವ ಹೊಸ ವ್ಯವಸ್ಥೆಯಿಂದ ಹೆಚ್ಚಿನ ಉದ್ದಿಮೆದಾರರು ಪಾಲಿಕೆ ಪರವಾನಗಿ ಪಡೆಯುವುದಕ್ಕೆ ಮುಂದಾಗಲಿದ್ದಾರೆ. ಅಧಿಕಾರಿಗಳ ನಿರೀಕ್ಷೆ ಪ್ರಕಾರ ಶೇ.40 ರಷ್ಟು ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸದಾಗಿ ಉದ್ದಿಮೆ ಆರಂಭಿಸುವವರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷದಲ್ಲಿ ತಾತ್ಕಾಲಿಕ ಉದ್ದಿಮೆ ಪರವಾನಗಿ ಮಂಜೂರು ಮಾಡುವ ಚಿಂತನೆ ಮಾಡಲಾಗಿದೆ. ಈ ಕುರಿತು ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಅನುಮೋದನೆ ಬಳಿಕ ಜಾರಿಗೊಳಿಸಲಾಗುವುದು.

- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಆರೋಗ್ಯ ವಿಭಾಗ