ಸಾರಾಂಶ
ಬಿಬಿಎಂಪಿಯು ಅನಧಿಕೃತ ಜಾಹೀರಾತು ತೆರವುಗೊಳಿಸುವುದಕ್ಕೆ ಪರಿಷ್ಕೃತ ಮಾರ್ಗಸೂಚಿ ರಚಿಸಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಬೆಂಗಳೂರು : ನಗರದಲ್ಲಿ ಅನಧಿಕೃತ ಜಾಹೀರಾತು ತಡೆಗಟ್ಟುವುದಕ್ಕೆ ವಲಯವಾರು ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡ ರಚಿಸುವುದು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವುದು ಸೇರಿದಂತೆ ಬಿಬಿಎಂಪಿಯು ಅನಧಿಕೃತ ಜಾಹೀರಾತು ತೆರವುಗೊಳಿಸುವುದಕ್ಕೆ ಪರಿಷ್ಕೃತ ಮಾರ್ಗಸೂಚಿ ರಚಿಸಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ನಗರದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ಲಿಖಿತ ಅನುಮೋದನೆ ಇಲ್ಲದೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವಂತಿಲ್ಲ. ಜತೆಗೆ, ಬಿಬಿಎಂಪಿಯ ಅನುಮೋದನೆ ಇಲ್ಲದೇ ಜಾಹೀರಾತು ಫ್ಲೆಕ್ಸ್ ಮುದ್ರಣ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೂ ನಗರದಲ್ಲಿ ಅನಧಿಕೃತ ಜಾಹೀರಾತು ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರು, ಅನಧಿಕೃತ ಜಾಹೀರಾತು ತೆರವುಗೊಳಿಸುವುದು, ಜಾಹೀರಾತು ಅಳವಡಿಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಗುರುವಾರ ಪರಿಷ್ಕೃತ ಮಾರ್ಗಸೂಚಿ ರಚಿಸಿದ್ದಾರೆ.
ಅನಧಿಕೃತ ಜಾಹೀರಾತು ತೆರವುಗೊಳಿಸಲು, ಮಾರ್ಷಲ್, ಕಿರಿಯ ಎಂಜಿನಿಯರ್, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇತೃತ್ವದಲ್ಲಿ ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡವನ್ನು ವಲಯ ಆಯುಕ್ತರು ರಚಿಸತಕ್ಕದ್ದು. ತಂಡದ ಒಬ್ಬ ಸದಸ್ಯರಾದರೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದಿನದ 24 ಗಂಟೆ ಹಾಜರಿಬೇಕು. ಅನಧಿಕೃತವಾಗಿ ಜಾಹೀರಾತು ಅಳವಡಿಸಿದ ಮಾಹಿತಿ ಸಿಕ್ಕ ಕೂಡಲೇ ತೆರವುಗೊಳಿಸಬೇಕು. ಹಾಗೆಯೇ ಅನಧಿಕೃತ ಜಾಹೀರಾತು ತೆರವುಗೊಳಿಸಿದ ವೆಚ್ಚವನ್ನು ಅಳವಡಿಸಿದವರಿಂದಲೇ ವಸೂಲಿ ಮಾಡಬೇಕು.
ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತು ತೆಗೆಯಲು, ಅನಧಿಕೃತ ಅಳವಡಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೆ ಹಾಗೂ ದಂಡ ವಿಧಿಸಲು, ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಬಿಬಿಎಂಪಿಯ ಆಯಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ನೀಡಲಾಗಿದೆ.
ಅನಧಿಕೃತ ಜಾಹೀರಾತು ಪ್ರದರ್ಶನದ ಬಗ್ಗೆ ದೂರು ಸ್ವೀಕರಿಸಲು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸಬೇಕು. ಅನಧಿಕೃತ ಜಾಹೀರಾತು ಫಲಕ ತೆರವಿಗೆ ಪೊಲೀಸರ ಪಡೆಯುವುದು. ಪ್ರಮುಖವಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಿಬಿಎಂಪಿಯ ಮಾರ್ಗಸೂಚಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ನಿಯತಕಾಲಿಕವಾಗಿ ಪರಿಶೀಲಿಸಬೇಕೆಂದು ಮುಖ್ಯ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.
ಆದೇಶ ಕಾಗಗದಕ್ಕೆ ಸೀಮಿತವೇ?:
ಬಿಬಿಎಂಪಿಯ ಮುಖ್ಯ ಆಯುಕ್ತರು ಕಳೆದ ಸೋಮವಾರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ನಗರದಲ್ಲಿರುವ ಅನಧಿಕೃತ ಜಾಹೀರಾತುಗಳನ್ನು ತಕ್ಷಣ ತೆರವುಗೊಳಿಸುವಂತೆ ನಿರ್ದೇಶಿಸಿದ್ದರು. ಆದರೆ, ಒಂದೇ ಒಂದು ಅನಧಿಕೃತ ಜಾಹೀರಾತು ತೆರವು ಮಾಡಿಲ್ಲ. ವಿಜಯನಗರ, ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೆಪ ಮಾತ್ರಕ್ಕೆ ಹಾಗೂ ಫೋಟೋ ದಾಖಲೆಗಾಗಿ ಬಿಬಿಎಂಪಿಯ ಅಧಿಕಾರಿಗಳು ತೆರವುಗೊಳಿಸಿ ಸುಮ್ಮನಾಗಿದ್ದಾರೆ. ಇನ್ನೂ ಸಾವಿರಾರು ಸಂಖ್ಯೆ ಅನಧಿಕೃತ ಜಾಹೀರಾತುಗಳು ರಾಜಾಜಿಸುತ್ತಿವೆ. ಈ ನಡುವೆ ಮುಖ್ಯ ಆಯಕ್ತರು ಗುರುವಾರ ಅನಧಿಕೃತ ಜಾಹೀರಾತಿಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ. ಈ ಮಾರ್ಗಸೂಚಿ ಜಾರಿಗೆ ಬರಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.