ಸಾರಾಂಶ
ಬೆಂಗಳೂರು : ಬಿಬಿಎಂಪಿ ಮಾದರಿಯಲ್ಲೇ ಕುಡಿಯುವ ನೀರಿನ ಬಾಕಿ ವಸೂಲಿಗೆ ಬೆಂಗಳೂರು ಜಲಮಂಡಳಿ ಶೀಘ್ರದಲ್ಲಿ ಒನ್‌ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಜಾರಿಗೊಳಿಸಲು ನಿರ್ಧರಿಸಿದೆ.
ಈ ಕುರಿತು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದು, ಒಟಿಎಸ್ ಜಾರಿಗೊಂಡರೆ ಎರಡು ತಿಂಗಳ ಅವಧಿಯಲ್ಲಿ ನೀರಿನ ಬಿಲ್ ಬಾಕಿ ಪಾವತಿ ಮಾಡಿದವರಿಗೆ ಬಡ್ಡಿ ಹಾಗೂ ವಿಧಿಸುವ ದಂಡದಲ್ಲಿ ಸಂಪೂರ್ಣ ರಿಯಾಯಿತಿ ನೀಡಲು ಯೋಜನೆ ರೂಪಿಸಲಾಗಿದೆ.
ಈಗಾಗಲೇ ಬೆಂಗಳೂರು ಜಲಮಂಡಲಿಯು ಆರ್ಥಿಕ ಹೊರೆ ಅನುಭವಿಸುತ್ತಿದೆ. ಐದನೇ ಹಂತದ ಕಾವೇರಿ ಯೋಜನೆ ಜಾರಿಯ ಬಳಿಕ ವಿದ್ಯುತ್ ಬಿಲ್ ಮೊತ್ತ ಸೇರಿದಂತೆ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಈ ನಡುವೆ ಜಲಮಂಡಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸುಮಾರು ₹616 ಕೋಟಿಗೂ ಅಧಿಕ ಬಾಕಿ ಬರಬೇಕಿದೆ. ಈ ಪೈಕಿ ಸಾರ್ವಜನಿಕರಿಂದ ₹316 ಕೋಟಿ ಬಾಕಿ ಇದೆ. ಇದರಲ್ಲಿ ₹189 ಕೋಟಿ ನೀರಿನ ಬಿಲ್ ಹಾಗೂ ₹126 ಕೋಟಿ ಬಡ್ಡಿ ಸೇರಿದೆ. ಉಳಿದಂತೆ ₹135 ಕೋಟಿ ವಾಣಿಜ್ಯ ಸಂಸ್ಥೆಗಳು, ₹69 ಕೋಟಿ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ₹95 ಕೋಟಿ ರಾಜ್ಯ ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ.
6 ತಿಂಗಳಲ್ಲಿ ₹57.47 ಕೋಟಿ ವಸೂಲಿ:
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧೀನ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ, ಬಾಕಿ ಹಣವನ್ನು ವಸೂಲು ಮಾಡಲಾಗುತ್ತಿದೆ. ಇನ್ನು ಬಾಕಿ ಉಳಿಸಿಕೊಂಡಿರುವ ಗೃಹ ಮತ್ತು ವಾಣಿಜ್ಯ ಸಂಪರ್ಕಗಳಿಗೆ ಹಲವು ಬಾರಿ ನೋಟಿಸ್ ನೀಡುವ ಜೊತೆಗೆ ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಿ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಕಳೆದ 6 ತಿಂಗಳಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳಿಂದ ₹42.76 ಕೋಟಿ, ರಾಜ್ಯ ಸರ್ಕಾರಿ ಇಲಾಖೆಗಳಿಂದ ₹11.34 ಕೋಟಿ ಮತ್ತು ಪ್ರಾಧಿಕಾರಗಳು, ಉದ್ದಿಮೆ ಸಂಸ್ಥೆಗಳಿಂದ ₹3.37 ಕೋಟಿ ಸೇರಿ ಒಟ್ಟು ₹57.47 ಕೋಟಿ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಕಿ ವಿವರ (ಕೋಟಿ ರು.)
ಸಂಪರ್ಕಬಾಕಿಬಡ್ಡಿಒಟ್ಟು
ಗೃಹ189.11126.99316.11
ವಾಣಿಜ್ಯ79.7355.81135.55
ರಾಜ್ಯ ಸರ್ಕಾರ56.7439.2595.99
ಕೇಂದ್ರ ಸರ್ಕಾರ61.037.9669
ಒಟ್ಟು386.62230.03616.66