ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ, ಕಲಬುರಗಿ ಕೃಷಿ ಇಲಾಖೆ ಜೆಡಿ ಕಛೇರಿಯಲ್ಲಿ ಮನ್ ಕಿ ಬಾತ್ ವೀಕ್ಷಿಸುತ್ತಿದ್ದವರು ಚಪ್ಪಾಳೆಯ ಸುರಿಮಳೆ ಸುರಿಸಿದರು. ಮೋದಿ ಬಾಯಲ್ಲಿ ಕಲಬುರಗಿ ರೊಟ್ಟಿ ವಿಚಾರ ಬರುತ್ತಿದ್ದಂತೆಯೇ ರೊಟ್ಟಿ ಉತ್ಪಾದಕಿ ಅಯ್ಯಮ್ಮ ಅವರ ಕಣ್ಣುಗಳಿಂದ ನೀರು ಸುರಿಯಿತು. ತಮ್ಮ ಕಡು ಕಷ್ಟದ ದಿನಗಳನ್ನು ನೆನೆದು ಅವರು ಭಾವುಕರಾದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ, ಕಲಬುರಗಿ ಕೃಷಿ ಇಲಾಖೆ ಜೆಡಿ ಕಛೇರಿಯಲ್ಲಿ ಮನ್ ಕಿ ಬಾತ್ ವೀಕ್ಷಿಸುತ್ತಿದ್ದವರು ಚಪ್ಪಾಳೆಯ ಸುರಿಮಳೆ ಸುರಿಸಿದರು. ಮೋದಿ ಬಾಯಲ್ಲಿ ಕಲಬುರಗಿ ರೊಟ್ಟಿ ವಿಚಾರ ಬರುತ್ತಿದ್ದಂತೆಯೇ ರೊಟ್ಟಿ ಉತ್ಪಾದಕಿ ಅಯ್ಯಮ್ಮ ಅವರ ಕಣ್ಣುಗಳಿಂದ ನೀರು ಸುರಿಯಿತು. ತಮ್ಮ ಕಡು ಕಷ್ಟದ ದಿನಗಳನ್ನು ನೆನೆದು ಅವರು ಭಾವುಕರಾದರು. ‘ಗಂಡ ಕೆಲಸ ಬಿಟ್ಟು ಮನೆಲಿ ಕುಳಿತಿದ್ದಾಗ ನಮಗೇ ತಿನ್ನಲು ರೊಟ್ಟಿ ಇಲ್ಲದ ಪರಿಸ್ಥಿತಿ ಇತ್ತು. ಮನೆಲಿಯೇ ರೊಟ್ಟಿ ತಯಾರಿಸಿ ನಾಲ್ಕಾರು ರೊಟ್ಟಿ ಮಾರಾಟ ಆರಂಭಿಸಿದ್ದೆ. ಇವತ್ತು ಅಧಿಕಾರಿಗಳ ಬೆಂಬಲದಿಂದ ರೊಟ್ಟಿ ತಯಾರಿಕೆಯ ಯಂತ್ರ ಖರೀದಿಸಿ, ನಾಲ್ಕಾರು ಮಹಿಳೆಯರಿಗೆ ಕೆಲಸ ಕೊಟ್ಟಿದ್ದೇನೆ. ಮೋದಿ ಅಂತವರ ಬಾಯಲ್ಲಿ ಈ ಮಾತು ಬಂತಲ್ಲಾ ಇದು ಬಹಳ ಹೆಮ್ಮೆಯ ವಿಚಾರ’ ಎನ್ನುತ್ತಾರೆ ಇವರು.ಜೋಳದ ರೊಟ್ಟಿಯ ಮಾರಾಟ ಹೆಚ್ಚಿದೆ. ರೊಟ್ಟಿಗೆ ಬ್ಯ್ರಾಂಡಿಂಗ್ ಮಾಡಿರೋದು ನಮ್ಮ ಉಪಜೀವನಕ್ಕೆ ಆಧಾರವಾಗಿದೆ. ರೊಟ್ಟಿ ಜೊತೆಗೇ ಧಪಾಟಿ, ಶೇಂಗಾ ಹಿಂಡಿ, ಚಟ್ನಿ, ಉಪ್ಪಿನಕಾಯಿಗೂ ಬೇಡಿಕೆ ಬರುತ್ತಿದೆ. ನಾವು ಇವುಗಳನ್ನು ಸಿದ್ದಪಡಿಸಿ ಪೂರೈಸುತ್ತಿದ್ದೇವೆ. ನಮಗೆ ಇದರಿಂದಾಗಿ ಜೀವನಕ್ಕೆ ಆಧಾರವಾಗಿದೆ. ಆದಾಯ ಹೆಚ್ಚುತ್ತಿದೆ.
-ಶರಣಮ್ಮ ಪಾಟೀಲ್, ರೊಟ್ಟಿ ಉತ್ಪಾದಕಿ, ಕಲಬುರಗಿ.