ಸಾರಾಂಶ
2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿ ಮೂಲಕ ಪರೋಕ್ಷ ತೆರಿಗೆ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದ ಕೇಂದ್ರ ಸರ್ಕಾರ, ಇದೀಗ ಜಿಎಸ್‌ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4ರಿಂದ 2ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ನವದೆಹಲಿ: 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿ ಮೂಲಕ ಪರೋಕ್ಷ ತೆರಿಗೆ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದ ಕೇಂದ್ರ ಸರ್ಕಾರ, ಇದೀಗ ಜಿಎಸ್‌ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4ರಿಂದ 2ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ತೆರಿಗೆ ಪದ್ಧತಿ ಸೆ.22ರಿಂದಲೇ ಜಾರಿಗೆ ಬರಲಿದೆ. ಇದರ ಜೊತೆಗೆ ದುಬಾರಿ ವಸ್ತುಗಳಿಗಾಗಿ ಶೇ.40ರಷ್ಟು ತೆರಿಗೆ ಪ್ರತ್ಯೇಕ ಸ್ತರವನ್ನೂ ಹೊಸದಾಗಿ ಸೃಷ್ಟಿಸಲಾಗಿದೆ.
ವೈಯಕ್ತಿಕ ಜೀವ ವಿಮೆ, ಆರೋಗ್ಯ ವಿಮೆ ಪ್ರೀಮಿಯಂ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ. ಸೋಪ್, ಹೇರ್ ಆಯಿಲ್, ಶಾಂಪೂ, ಶೇವಿಂಗ್ ಕ್ರೀಮ್ ಮೇಲಿನ ತೆರಿಗೆ ಶೇ.12ರಿಂದ ಶೇ.5ಕ್ಕೆ ಇಳಿಯಲಿದೆ. 1200 ಸಿಸಿ ಒಳಗಿನ ಪೆಟ್ರೋಲ್ ಹಾಗೂ 1500 ಸಿಸಿ ಒಳಗಿನ ಡೀಸೆಲ್ ಕಾರುಗಳು, 350 ಸಿಸಿ ಒಳಗಿನ ಬೈಕ್‌ಗಳು ಅಗ್ಗವಾಗಲಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ, ಎಲ್ಲಾ ರಾಜ್ಯಗಳ ಸಚಿವರ ಸಮ್ಮುಖದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದರನ್ವಯ, ಪ್ರಸಕ್ತ ಇರುವ ಶೇ.5, 12, 18 ಮತ್ತು 28ರ ತೆರಿಗೆ ಸ್ತರ ರದ್ದಾಗಿ ಕೇವಲ ಶೇ.5 ಮತ್ತು ಶೇ.18 ಸ್ತರದ ತೆರಿಗೆ ಜಾರಿಗೆ ಬರಲಿದೆ.
ತೆರಿಗೆ ಕಡಿತದ ಜೊತೆಗೆ ಮಧ್ಯಮ, ಸಣ್ಣ ಮತ್ತು ಕಿರು ಉದ್ಯಮಗಳು ಹಾಗೂ ಸ್ಟಾರ್ಟಪ್‌ಗಳ ನೋಂದಣಿಗೆ ಹಾಲಿ ಇರುವ 30 ದಿನಗಳ ಗಡುವನ್ನು ಕೇವಲ 3 ದಿನಕ್ಕೆ ಇಳಿಸುವ ನೀತಿ ಜಾರಿಗೂ ಮಂಡಳಿ ಅನುಮೋದನೆ ನೀಡಿದೆ.
ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ದುಬಾರಿ ತೆರಿಗೆ ಹೇರಿರುವ ಹಿನ್ನೆಲೆಯಲ್ಲಿ ರಫ್ತು ವಲಯ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ದೇಶೀಯವಾಗಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲು ಜಿಎಸ್‌ಟಿ ಕಡಿತಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದು, ಇದು ಮಧ್ಯಮವರ್ಗಕ್ಕೆ ಬಂಪರ್ ಕೊಡುಗೆಯಾಗಿದೆ ಎಂದು
0%
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂ ಮೇಲಿನ ಜಿಎಸ್‌ಟಿ ಶೇ.18ರಿಂದ ಶೂನ್ಯಕ್ಕೆ. ಶೇ.5ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದ ರೋಟಿ, ಪರಾಠ, ಜೀವ ಉಳಿಸುವ ಔಷಧಿಗಳು ಇನ್ನು ಶೂನ್ಯ ತೆರಿಗೆ ವ್ಯಾಪ್ತಿಗೆ ಸೇರಲಿವೆ. ಬ್ರೆಡ್, ಹಾಲು, ಪನ್ನೀರ್.
5%
ಶೇ.12ರ ತೆರಿಗೆ ವ್ಯಾಪ್ತಿಯಲ್ಲಿದ್ದ ಸೋಪ್, ಹೇರ್ ಆಯಿಲ್, ಶಾಂಪೂ, ಟಾಯ್ಲೆಟ್ ಸೋಪ್ ಬಾರ್, ಟೂತ್ ಬ್ರಶ್, ಶೇವಿಂಗ್ ಕ್ರೀಮ್, ವೈದ್ಯಕೀಯ ಗುಣಮಟ್ಟದ ಆಮ್ಲಜನಕ, ಎಲ್ಲಾ ರೀತಿಯ ಡಯಾಗ್ನಾಸ್ಟಿಕ್ ಕಿಟ್, ರೇಜೆಂಟ್ಸ್, ಗ್ಲುಕೋಮೀಟರ್, ಟೆಸ್ಟ್ ಸ್ಟ್ರಿಪ್, ಕನ್ನಡಕದ ಮಸೂರಗಳು, ಮ್ಯಾಪ್, ಚಾರ್ಟ್, ಗ್ಲೋಬ್, ಪೆನ್ಸಿಲ್, ನೋಟ್‌ಪುಸ್ತಕ, ಎರೇಸರ್, ಶಾರ್ಪ್‌ನರ್, ಎಕ್ಸ್ಸೈಸ್ ಬುಕ್, ಟ್ರ್ಯಾಕ್ಟರ್, ಅನುಸೂಚಿತ ಜೈವಿಕ ಕೀಟನಾಶಕ, ಮೈಕ್ರೋ ರಾಸಾಯನಿಕ, ಹನಿ ನೀರಾವರಿ ಪದ್ಧತಿ, ಸ್ಪಿಂಕ್ಲರ್, ಕೃಷಿ, ತೋಟಗಾರಿಕೆ ಯಂತ್ರೋಪಕರಣ, ಭೂಮಿ ಹದಗೊಳಿಸುವ ಉಪಕರಣ, ಕರಕುಶಲ ವಸ್ತುಗಳು, ಮಾರ್ಬಲ್ಸ್, ಗ್ರಾನೈಟ್.
ಶೇ.18ರ ತೆರಿಗೆ ವ್ಯಾಪ್ತಿಯಲ್ಲಿದ್ದ ಬೆಣ್ಣೆ, ತುಪ್ಪ, ಚೀಸ್, ಪ್ಯಾಕ್ ಮಾಡಿದ ನಮ್‌ಕೀನ್, ಭುಜಿಯಾ, ಮಿಕ್ಷ್ಚರ್, ಫೀಡಿಂಗ್ ಬಾಟಲ್, ನ್ಯಾಪ್‌ಕಿನ್, ಕ್ಲಿನಿಕಲ್ ಡೈಪರ್, ಹೊಲಿಗೆ ಯಂತ್ರ, ಮತ್ತು ಅದರ ಬಿಡಿಭಾಗ. ಥರ್ಮಾಮೀಟರ್, ಟ್ರ್ಯಾಕ್ಟರ್ ಟೈರ್ ಮತ್ತು ಬಿಡಿಭಾಗಗಳು.
18%
ಶೇ.28ರ ವ್ಯಾಪ್ತಿಯಲ್ಲಿದ್ದ ಸಿಮೆಂಟ್, ಕಾರುಗಳು (1200 ಸಿಸಿ ಒಳಗಿನ, 4000 ಮಿ.ಮೀ. ಉದ್ದ ಮೀರದ ಪೆಟ್ರೋಲ್ ಮತ್ತು ಹೈಬ್ರಿಡ್ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಕಾರು) (1500 ಸಿಸಿ ಮತ್ತು 4000 ಮಿ.ಮೀ ಮೀರದ ಡೀಸೆಲ್ ಮತ್ತು ಡೀಸೆಲ್ ಹೈಬ್ರಿಡ್ ಕಾರುಗಳು). ತ್ರಿಚಕ್ರ ವಾಹನಗಳು, ಮೋಟಾರ್ ಸೈಕಲ್ (350 ಸಿಸಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯ), ಸರಕು ಸಾಗಣೆ ವಾಹನಗಳು, ಏರ್ ಕಂಡೀಷನರ್, 32 ಇಂಚಿಗಿಂತ ಹೆಚ್ಚಿನ ಗಾತ್ರದ ಟೀವಿ, ಮಾನಿಟರ್ ಮತ್ತು ಪ್ರೊಜೆಕ್ಟರ್, ಡಿಷ್ ವಾಷಿಂಗ್ ಮಷಿನ್ಸ್.
40%
1200 ಸಿಸಿ ಮೇಲ್ಪಟ್ಟ ಪೆಟ್ರೋಲ್ ಕಾರು, 1500 ಸಿಸಿ ಮೇಲ್ಪಟ್ಟ ಡೀಸೆಲ್ ಕಾರು, 350 ಸಿಸಿ ಮೇಲ್ಪಟ್ಟ ಮೋಟಾರ್ ಸೈಕಲ್, ಖಾಸಗಿ ಬಳಕೆಯ ವಿಮಾನ. ಪಾನ್ ಮಸಾಲಾ, ತಂಬಾಕು ಉತ್ಪನ್ನ, ಸಿಗರೇಟ್, ಸಕ್ಕರೆ ಬೆರೆಸಿದ ತಂಪು ಪಾನೀಯ. 28% ಸ್ಲ್ಯಾಬ್‌ನಲ್ಲಿರುವ ಹಲವು ವಸ್ತುಗಳು ಶೇ.40ರ ಸ್ಲ್ಯಾಬ್‌ಗೆ. ಸೆ.22ರಿಂದ ಇದು ಜಾರಿ ಆಗದು.
ಭರವಸೆ ಸಾಕಾರದತ್ತ ಕೆಲಸಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ಉದ್ದೇಶದ ಬಗ್ಗೆ ನಾನು ಮಾತನಾಡಿದ್ದೆ. ಸಾಮಾನ್ಯ ಜನರಿಗೆ ಸುಲಭ ಜೀವನ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯೊಂದಿಗೆ ಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಅದರ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ವಿವರವಾದ ಪ್ರಸ್ತಾವನೆ ಸಿದ್ಧಪಡಿಸಿತ್ತು. ಇದೀಗ ಕೇಂದ್ರ ಮತ್ತು ರಾಜ್ಯಗಳನ್ನೊಳಗೊಂಡ ಜಿಎಸ್‌ಟಿ ಮಂಡಳಿಯು ದರ ಇಳಿಕೆ ಮತ್ತು ಸುಧಾರಣೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದೆ.
ನರೇಂದ್ರ ಮೋದಿ, ಪ್ರಧಾನಿ