ಸಾರಾಂಶ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಹಾಲಿ ಇರುವ ನಾಲ್ಕು ತೆರಿಗೆಯ ಸ್ಲ್ಯಾಬ್‌ಗಳನ್ನು ಎರಡಕ್ಕಿಳಿಸುವ ಕೇಂದ್ರ ಸರ್ಕಾರದ ಮಹತ್ವದ ಪ್ರಸ್ತಾಪಕ್ಕೆ ಗುರುವಾರ ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಇದ್ದ ರಾಜ್ಯ ಸಚಿವರ ಗುಂಪು (ಜಿಎಂಒ) ಅನುಮೋದನೆ ನೀಡಿದೆ. ಹೀಗಾಗಿ ಶೇ.90ರಷ್ಟು ವಸ್ತುಗಳ ದರ ಈಗಿಗಿಂತ ಅಗ್ಗವಾಗುವ ನಿರೀಕ್ಷೆ ಇದೆ.
ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಇರುವ ಶೇ.12 ಮತ್ತು ಶೇ.28 ಸ್ಲ್ಯಾಬ್ ಅನ್ನು ರದ್ದು ಮಾಡುವ ಕೇಂದ್ರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ. ಅದರಂತೆ ಇನ್ನು ಮುಂದೆ ಶೇ.5 ಮತ್ತು ಶೇ.18ರ ಜಿಎಸ್‌ಟಿ ಸ್ಲ್ಯಾಬ್ ಅಷ್ಟೇ ಅಸ್ತಿತ್ವದಲ್ಲಿರಲಿದೆ. ಆದರೆ, ಅಲ್ಟ್ರಾಲಕ್ಸುರಿ (ಐಷಾರಾಮಿ) ವಸ್ತುಗಳು ಮತ್ತು ಸಿನ್ ಗೂಡ್ಸ್ (ಜೂಜು, ತಂಬಾಕು ಮತ್ತಿತರ ವಸ್ತುಗಳು)ಗಳ ಮೇಲೆ ಶೇ.40 ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
ದೀಪಾವಳಿ ವೇಳೆಗೆ ಜಾರಿಗೆ ಬರಲಿದೆ ಎನ್ನಲಾದ ಈ ಪರಿಷ್ಕೃತ ಜಿಎಸ್‌ಟಿಯಡಿ ಈವರೆಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತಿರುವ ಶೇ.99ರಷ್ಟು ವಸ್ತುಗಳನ್ನು ಶೇ.5ರ ತೆರಿಗೆ ಸ್ಲ್ಯಾಬ್‌ಗೆ ವರ್ಗಾವಣೆ ಮಾಡಲಾಗುತ್ತದೆ, ಅದೇ ರೀತಿ ಶೇ.28 ತೆರಿಗೆ ವಿಧಿಸಲಾಗುತ್ತಿದ್ದ ಶೇ.90ರಷ್ಟು ವಸ್ತುಗಳನ್ನು ಶೇ.18ರ ಸ್ಲ್ಯಾಬ್‌ನಡಿ ತರಲಾಗುತ್ತದೆ. ಉಳಿದಂತೆ 5-7 ಸಿನ್ ಗೂಡ್ಸ್‌ಗಳ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ.
ಇದೇ ವೇಳೆ ಅವರು ಕೇಂದ್ರ ಸರ್ಕಾರದ ಪ್ರಸ್ತಾಪವು ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ತರಲಿರುವ ಸುಧಾರಣೆಯಿಂದ ಆಗುವ ಆದಾಯ ನಷ್ಟವನ್ನು ಯಾವ ರೀತಿ ಭರಿಸಲಾಗುತ್ತದೆ ಎಂಬುದರ ಕುರಿತು ಕೇಂದ್ರದ ಪ್ರಸ್ತಾಪದಲ್ಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ದೀಪಾವಳಿ ವೇಳೆಗೆ ಜನಸಾಮಾನ್ಯರಿಗೆ ಜಿಎಸ್‌ಟಿ ಸುಧಾರಣೆಯ ಗಿಫ್ಟ್ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ವಿತ್ತ ಸಚಿವಾಲಯವು ಇಂಥದ್ದೊಂದು ಪ್ರಸ್ತಾಪವನ್ನು ಸಚಿವರ ಗುಂಪಿನ ಮುಂದಿಟ್ಟಿದೆ.