ದಿಲ್ಲಿಲೂ ಗ್ಯಾರಂಟಿ ಘೋಷಿಸಿದ ‘ಗ್ಯಾರಂಟಿ ರಾಯಭಾರಿ’ ಡಿಕೆಶಿ! ಕರ್ನಾಟಕ ಗೃಹಲಕ್ಷ್ಮೀ ರೀತಿ ಪ್ಯಾರಿ ದೀದಿ ಯೋಜನೆ

| Published : Jan 07 2025, 11:18 AM IST

dk shivakumar
ದಿಲ್ಲಿಲೂ ಗ್ಯಾರಂಟಿ ಘೋಷಿಸಿದ ‘ಗ್ಯಾರಂಟಿ ರಾಯಭಾರಿ’ ಡಿಕೆಶಿ! ಕರ್ನಾಟಕ ಗೃಹಲಕ್ಷ್ಮೀ ರೀತಿ ಪ್ಯಾರಿ ದೀದಿ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ತಿಂಗಳು ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಅಲ್ಲಿ ಕೂಡ ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ 2500 ರು. ಗ್ಯಾರಂಟಿ ಸ್ಕೀಂ ಘೋಷಿಸಿದ್ದಾರೆ.

ನವದೆಹಲಿ : ಮುಂದಿನ ತಿಂಗಳು ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಅಲ್ಲಿ ಕೂಡ ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ 2500 ರು. ಗ್ಯಾರಂಟಿ ಸ್ಕೀಂ ಘೋಷಿಸಿದ್ದಾರೆ. ಇದೇ ವೇಳೆ ಕರ್ನಾಟಕದ ಉಪಮುಖ್ಯಮಂತ್ರಿಯನ್ನು ದೆಹಲಿ ಕಾಂಗ್ರೆಸ್‌ ನಾಯಕರು ‘ಗ್ಯಾರಂಟಿಯ ಬ್ರ್ಯಾಂಡ್ ರಾಯಭಾರಿ’ ಎಂದು ಸಂಬೋಧಿಸಿದ್ದಾರೆ.

ಬಳಿಕ ಮಾತನಾಡಿದ ಡಿಕೆಶಿ, ‘ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರ್ನಾಟಕದ ಗೃಹಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 2500 ರು. ಆರ್ಥಿಕ ನೆರವು ನೀಡುವ ‘ಪ್ಯಾರಿ ದೀದಿ ಯೋಜನಾ’ ಜಾರಿಗೊಳಿಸುತ್ತೇವೆ’ ಎಂದು ಘೋಷಿಸಿ ಚುಣಾವಣಾ ಅಖಾಡ ರಂಗೇರುವಂತೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯ ಆರಂಭದಲ್ಲಿ ದಿಲ್ಲಿ ಕಾಂಗ್ರೆಸ್‌ ನಾಯಕ ಅಭಯ್ ದುಬೆ ಅವರು, ಡಿಕೆಶಿ ಅವರನ್ನು ‘ದೇಶದ ಗ್ಯಾರಂಟಿ ಸ್ಕೀಂಗಳ ಬ್ರ್ಯಾಂಡ್‌ ರಾಯಭಾರಿ ಶಿವಕುಮಾರ್‌ ಇಲ್ಲಿಗೆ ಬಂದಿದ್ದಾರೆ’ ಎಂದು ಸ್ವಾಗತಿಸಿದರು. ಬಳಿಕ ಮಾತನಾಡಿದ ಡಿಕೆಶಿ ಅವರು, ‘ಇಂದು ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಲು ನಾನಿಲ್ಲಿ ಬಂದಿದ್ದೇನೆ. ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಮರಳುವ ಪೂರ್ಣ ವಿಶ್ವಾಸ ನಮ್ಮಲ್ಲಿದೆ. ನಾವು ಗೆದ್ದು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಯೋಜನೆ ಜಾರಿಗೊಳಿಸಲಾಗುವುದು’ ಎಂದು ಡಿಕೆಶಿ ಘೋಷಿಸಿದರು.

‘ದೇಶದಲ್ಲಿ ಅಥವಾ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್‌ ಏನೇನು ಭರವಸೆ ನೀಡಿದೆಯೋ ಅದನ್ನು ಪಾಲನೆ ಮಾಡಿದೆ. ಒಂದೋ ನಾವು ಅಂಥ ಭರವಸೆಗಳನ್ನು ಜಾರಿ ಮಾಡಿದ್ದೇವೆ ಇಲ್ಲವೇ ಜಾರಿ ಮಾಡಲಿದ್ದೇವೆ. ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ರಾಜ್ಯವ್ಯಾಪಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ 10 ಕೆಜಿ ಅಕ್ಕಿ, ನಿರುದ್ಯೋಗಿಗಳಿಗೆ ಮಾಸಿಕ 3000 ರು., ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಮಾಸಿಕ 2000 ರು. ನೀಡಲಾಗುತ್ತಿದೆ’ ಎಂದು ಡಿಕೆಶಿ ಹೇಳಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ದೇವೇಂದರ್‌ ಯಾದವ್, ‘ಹೋಗಿ ಹರ್‌ ಜರೂರತ್‌ ಪೂರಿ, ಕಾಂಗ್ರೆಸ್ ಹೈ ಜರೂರಿ (ಎಲ್ಲಾ ಭರವಸೆ ಈಡೇರಿಸಲಾಗುವುದು, ಕಾಂಗ್ರೆಸ್‌ ಅನಿವಾರ್ಯ) ಎಂಬುದು ನಮ್ಮ ಟ್ಯಾಗ್‌ ಲೈನ್‌ ಆಗಿರಲಿದೆ’ ಎಂದರು.

ಅಲ್ಲದೆ, ’ಕರ್ನಾಟಕ್‌ ನೇ ಕೀ ಹೈ ಉಮ್ಮೀದ್‌ ಪೂರಿ, ದಿಲ್ಲಿ ನೇ ಕಹಾ ಹೈ ಕಾಂಗ್ರೆಸ್‌ ಹೈ ಜರೂರಿ’ (ಕರ್ನಾಟಕ ಆಕಾಂಕ್ಷೆ ಈಡೇರಿಸಿದೆ. ಕಾಂಗ್ರೆಸ್‌ ತನಗೂ ಬೇಕು ಎಂದು ದಿಲ್ಲಿ ಹೇಳುತ್ತಿದೆ) ಎಂಬ ಉದ್ಘೋಷವನ್ನು ಡಿ.ಕೆ. ಶಿವಕುಮಾರ್‌ ಅವರನ್ನು ಉದ್ದೇಶಿಸಿ ನುಡಿದರು.