ಮುಂದುವರಿದ ಗ್ಯಾರಂಟಿ ಭರಾಟೆ : ಪದವೀಧರರಿಗೆ ₹1000 ಭತ್ಯೆ - ಚಾಲಕರಿಗೆ ₹15000 ಫ್ರೀ

| N/A | Published : Oct 05 2025, 01:02 AM IST / Updated: Oct 05 2025, 03:42 AM IST

PM Modi latest statements
ಮುಂದುವರಿದ ಗ್ಯಾರಂಟಿ ಭರಾಟೆ : ಪದವೀಧರರಿಗೆ ₹1000 ಭತ್ಯೆ - ಚಾಲಕರಿಗೆ ₹15000 ಫ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕರ್ನಾಟಕದಿಂದ ಆರಂಭ ಗ್ಯಾರಂಟಿ ಭರಾಟೆ ಇದೀಗ ದೇಶಾದ್ಯಂತ ವ್ಯಾಪಿಸಿದೆ. ಬಿಹಾರದಲ್ಲಿ ಎನ್‌ಡಿಎ ಮತ್ತು ಆಂಧ್ರದಲ್ಲಿ ಸಿಎಂ ನಾಯ್ಡು ಆಟೋರಿಕ್ಷಾ ಚಾಲಕರಿಗೆ ಉಚಿತ ಕೊಡುಗೆಗಳನ್ನ ನೀಡಿದ್ದಾರೆ.

 ನವದೆಹಲಿ :  ಶೀಘ್ರ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಗ್ಯಾರಂಟಿ ಭರಾಟೆಗಳು ಮುಂದುವರಿದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜತೆಗೂಡಿ ಶನಿವಾರ ಮತ್ತಷ್ಟು ‘ಜನಪ್ರಿಯ ಯೋಜನೆ’ಗಳಿಗೆ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಮಹಿಳೆಯರಿಗೆ ತಲಾ 10 ಸಾವಿರ ರು. ನೀಡುವ ಯೋಜನೆ ಆರಂಭಿಸಿದ್ದ ಅವರು, ಈ ಸಲ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸುವ ಯೋಜನೆಗಳ ಲೋಕಾರ್ಪಣೆ ಮಾಡಿದ್ದಾರೆ.

ನಿತೀಶ್‌ ಸರ್ಕಾರದ ‘ಮುಖ್ಯಮಂತ್ರಿ ನಿಶ್ಚಿತ ಸ್ವಯಂ ಸಹಾಯತಾ ಭತ್ತಾ ಯೋಜನೆ’ಗೆ ಮೋದಿ ವರ್ಚುವಲ್‌ ಆಗಿ ಶನಿವಾರ ಚಾಲನೆ ನೀಡಿದರು. ಇದರ ಅಡಿಯಲ್ಲಿ ಸುಮಾರು 5 ಲಕ್ಷ ಪದವೀಧರರಿಗೆ 2 ವರ್ಷಗಳವರೆಗೆ ತಲಾ 1,000 ರು.ಗಳ ಮಾಸಿಕ ಭತ್ಯೆ ಹಾಗೂ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಇದರ ಜತೆಗೆ, 4 ಲಕ್ಷ ರು.ಗಳವರೆಗೆ ಬಡ್ಡಿರಹಿತ ಶಿಕ್ಷಣ ಸಾಲ ಪಡೆಯುವ ‘ಬಿಹಾರ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್’ ಯೋಜನೆಗೂ ಅವರು ಹಸಿರು ನಿಶಾನೆ ತೋರಿಸಿದರು.

ಇದೇ ವೇಳೆ ದೇಶಾದ್ಯಂತ 1000 ಐಟಿಐಗಳನ್ನು (ಕೈಗಾರಿಕಾ ತರಬೇತಿ ಸಂಸ್ಥೆಗಳು) ಮೇಲ್ದರ್ಜೆಗೇರಿಸುವ ಕೇಂದ್ರ ಸರ್ಕಾರದ 60 ಸಾವಿರ ಕೋಟಿ ರು. ಯೋಜನೆಗೂ ಚಾಲನೆ ನೀಡಿದರು.

ಆಂಧ್ರದಲ್ಲಿ ಆಟೋ, ಕ್ಯಾಬ್‌ ಚಾಲಕರಿಗೆ ₹15000 ಫ್ರೀ

 ವಿಜಯವಾಡ : ಆಂಧ್ರಪ್ರದೇಶದ ಟಿಡಿಪಿ-ಜನಸೇನೆ-ಬಿಜೆಪಿ ಮೈತ್ರಿ ಸರ್ಕಾರ ‘ಉಚಿತ ಗ್ಯಾರಂಟಿ ಭರಾಟೆ’ ಮುಂದುವರಿಸಿದೆ. 2.9 ಲಕ್ಷಕ್ಕೂ ಅಧಿಕ ಆಟೋ, ಕ್ಯಾಬ್‌, ಮ್ಯಾಕ್ಸಿಕ್ಯಾಬ್‌ ಚಾಲಕರಿಗೆ ವಾರ್ಷಿಕ 15,000 ರು. ಧನಸಹಾಯ ನೀಡುವ ‘ಆಟೋ ಚಾಲಕರ ಸೇವೆ’ ಯೋಜನೆಗೆ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಶನಿವಾರ ಚಾಲನೆ ನೀಡಿದ್ದಾರೆ.

ಆಂಧ್ರದ ಸರ್ಕಾರಿ ಬಸ್‌ಗಳಲ್ಲಿ, ಕರ್ನಾಟಕ ರೀತಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಸ್ತ್ರೀ ಶಕ್ತಿ’ ಯೋಜನೆಯನ್ನು ಇತ್ತೀಚೆಗೆ ಜಾರಿಗೆ ತರಲಾಗಿತ್ತು. ಇದರಿಂದ ಆಟೋ ಚಾಲಕರಿಗೆ ಸಮಸ್ಯೆ ಆಗಿದೆ ಎಂಬ ಕೂಗು ಕೇಳಿಬಂದಿತ್ತು. ಹೀಗಾಗಿ ಆಟೋ ಚಾಲಕರ ಜೀವನ ಸುಧಾರಣೆ ಈ ಯೋಜನೆ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

2.9 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾ, ಕ್ಯಾಬ್‌, ಮ್ಯಾಕ್ಸಿಕ್ಯಾಬ್‌ ಚಾಲಕರು ಈ ಯೋಜನೆಯ ಹಣಕಾಸಿನ ನೆರವು ಪಡೆಯಲಿದ್ದಾರೆ. ಇವರೆಲ್ಲರ ಖಾತೆಗೂ 2025-26ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ನೇರವಾಗಿ 436 ಕೋಟಿ ರು. ವರ್ಗಾಯಿಸಲಾಗುತ್ತದೆ.ಎನ್‌ಟಿಆರ್‌ ಜಿಲ್ಲೆಯ ವಿಜಯವಾಡದ ಸಿಂಗ್‌ ನಗರದಲ್ಲಿ ಫಲಾನುಭವಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆಯನ್ನು ಸಿಎಂ ನಾಯ್ಡು ಆಟೋ ಚಾಲಕರ ಯೂನಿಫಾರಂನಲ್ಲೇ ಯೋಜನೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಡಿಸಿಎಂ ಪವನ್‌ಕಲ್ಯಾಣ್‌, ಸಚಿವ ನಾರಾ ಲೋಕೇಶ್‌ ಕೂಡ ಆಟೋ ಚಾಲಕರ ಯೂನಿಫಾರಂ ಧರಿಸಿ ಗಮನ ಸೆಳೆದರು.

Read more Articles on