ತೆಲುಗು ದೇಶಂನಿಂದ ಪ್ರಯೋಗಾಲಯ ವರದಿ ಬಿಡುಗಡೆ । ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ಮೀನೆಣ್ಣೆ: ಲ್ಯಾಬ್‌ ವರದಿ!

| Published : Sep 20 2024, 01:50 AM IST / Updated: Sep 20 2024, 05:12 AM IST

tirupathi laddu
ತೆಲುಗು ದೇಶಂನಿಂದ ಪ್ರಯೋಗಾಲಯ ವರದಿ ಬಿಡುಗಡೆ । ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ಮೀನೆಣ್ಣೆ: ಲ್ಯಾಬ್‌ ವರದಿ!
Share this Article
  • FB
  • TW
  • Linkdin
  • Email

ಸಾರಾಂಶ

ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್ ಸರ್ಕಾರ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸುತ್ತಿತ್ತು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪಗಳಿಗೆ ಸಾಕ್ಷಿಯಾಗಿ ಪ್ರಯೋಗಾಲಯ ವರದಿ  ಬಿಡುಗಡೆ ಮಾಡಿದೆ.

ಅಮರಾವತಿ: ‘ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್ ಸರ್ಕಾರ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸುತ್ತಿತ್ತು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪಗಳಿಗೆ ಸಾಕ್ಷಿಯಾಗಿ ಪ್ರಯೋಗಾಲಯದ ವರದಿಯೊಂದನ್ನು ನಾಯ್ಡು ಅವರ ತೆಲುಗುದೇಶಂ ಪಕ್ಷ (ಟಿಡಿಪಿ) ಬಿಡುಗಡೆ ಮಾಡಿದೆ.

ಜು.17ನೇ ತಾರೀಖಿನ ವರದಿಯಲ್ಲಿ ‘ತಿರುಪತಿ ಲಡ್ಡು ಪ್ರಸಾದದ ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿಕೊಬ್ಬಿನ ಕುರುಹುಗಳಿವೆ’ ಎಂದು ಬರೆಯಲಾಗಿದೆ. ಇದು ಜಗನ್‌ ಅವಧಿಯಲ್ಲಿನ ಪ್ರಸಾದ ತಪಾಸಿಸಿ ಸಿದ್ಧಪಡಿಸಿದ ವರದಿಯಾಗಿದೆ.

ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ ತೆಲುಗುದೇಶಂ ನಾಯಕ ಅನಂ ರೆಡ್ಡಿ, ‘ಈ ವರದಿಯಿಂದ ಜಗನ್‌ ಸರ್ಕಾರ ಎಸಗಿದ ಕೃತ್ಯ ಸಾಬೀತಾಗಿದೆ. ಅವರು ಪ್ರಸಾದದಲ್ಲಿ ಅದ್ಯಾವ ಕೊಬ್ಬು ಬಳಸಿದ್ದಾರೋ? ಹಂದಿ ಕೊಬ್ಬೋ, ದನದ ಕೊಬ್ಬೋ, ನಾಯಿ ಕೊಬ್ಬೋ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲ್ಯಾಬ್‌ ವರದಿಯಲ್ಲೇನಿದೆ?:

‘ಗುಜರಾತ್‌ನ ಕೇಂದ್ರ ಸರ್ಕಾರದ ಉಸ್ತುವಾರಿಯ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನಲ್ಲಿರುವ ಸಿಎಎಲ್‌ಎಫ್‌ (ಸೆಂಟರ್‌ ಆಫ್‌ ಅನಾಲಿಸಿಸ್‌ ಆ್ಯಂಡ್‌ ಲರ್ನಿಂಗ್‌ ಇನ್‌ ಲೈವ್‌ಸ್ಟಾಕ್‌ ಆ್ಯಂಡ್ ಫುಡ್‌), ಪ್ರಯೋಗಾಲಯವು ತುಪ್ಪದಲ್ಲಿ ಜಾನುವಾರು ಕೊಬ್ಬನ್ನು ಬಳಸಲಾಗಿದೆ’ ಎಂದು ದೃಢಪಡಿಸಿದೆ’ ಎಂದು ಟಿಡಿಪಿ ನಾಯಕರು ಲ್ಯಾಬ್‌ ವರದಿಯ ಪ್ರತಿ ಬಿಡುಗಡೆ ಮಾಡಿದ್ದಾರೆ.

ವರದಿಯು ತುಪ್ಪದಲ್ಲಿ ಮೀನಿನ ಎಣ್ಣೆ (ಫಿಶ್‌ ಆಯಿಲ್‌), ದನದ ಕೊಬ್ಬು (ಬೀಫ್‌ ಟ್ಯಾಲೋ) ಮತ್ತು ಹಂದಿ ಕೊಬ್ಬು (ಟ್ಯಾಲೋ) ಕುರುಹುಗಳಿವೆ ಎಂದಿದೆ.

ಚಂದ್ರಬಾಬು ನಾಯ್ಡು ಆರೋಪ ಏನು?

ಶ್ರೀವಾರಿ ಲಡ್ಡುವನ್ನು ಲಕ್ಷಾಂತರ ಭಕ್ತರು ಪವಿತ್ರ ಎಂದು ನಂಬಿದ್ದಾರೆ. ಆದರೆ ಹಿಂದಿನ ಜಗನ್‌ ಸರ್ಕಾರ ಇಂಥ ಲಡ್ಡು ತಯಾರಿಕೆಗೆ ಕಳಪೆ ವಸ್ತುಗಳನ್ನು ಬಳಕೆ ಮಾಡುತ್ತಿತ್ತು. ಲಡ್ಡು ತಯಾರಿ ಸ್ಥಳದಲ್ಲಿ ಯಾವುದೇ ಶುಚಿತ್ವ ಇರಲಿಲ್ಲ. ಯಾವುದೇ ಗುಣಮಟ್ಟ ಕಾಪಾಡುತ್ತಿರಲಿಲ್ಲ. ಅಷ್ಟೇ ಏಕೆ ಲಡ್ಡು ತಯಾರಿಸಲು ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಈ ಮೂಲಕ ಭಕ್ತರ ನಂಬಿಕೆಗೆ ಭಾರೀ ಘಾಸಿ ಉಂಟು ಮಾಡುತ್ತಿತ್ತು. ಆದರೆ ನಾವು ಇದೀಗ ಶುದ್ಧ ತುಪ್ಪ ಬಳಸಿ ಲಡ್ಡು ತಯಾರಿಸುತ್ತಿದ್ದೇವೆ.

- ಚಂದ್ರಬಾಬು ನಾಯ್ಡು, ಆಂಧ್ರ ಸಿಎಂ

--ಆರೋಪ ಸುಳ್ಳು, ದೇವರಮುಂದೆ ಪ್ರಮಾಣಕ್ಕೆ ಸಿದ್ಧತೆಲುಗುದೇಶಂ ಆರೋಪ ಸುಳ್ಳು ಮತ್ತು ಆಧಾರರಹಿತ. ಇದು ಅನೈತಿಕ ರಾಜಕೀಯ ತಂತ್ರ. ಇಂಥ ಆರೋಪವನ್ನು ಊಹಿಸಿಕೊಳ್ಳಲೂ ಆಗದು. ನಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ತಿರುಮಲ ದೇವಸ್ಥಾನದಲ್ಲಿ ಪ್ರಮಾಣ ಮಾಡಲೂ ಸಿದ್ಧ. ನಾಯ್ಡು ಕೂಡ ತಾವು ಮಾಡಿದ ಆರೋಪ ನಿಜ ಎಂದು ಆಣೆ-ಪ್ರಮಾಣಕ್ಕೆ ಸಿದ್ಧರಿದ್ದಾರಾ? ಆರೋಪ ಸಾಬೀತುಪಡಿಸಲು ವಿಫಲರಾದರೆ ನಾಯ್ಡು ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತೇವೆ.

- ವೈ.ವಿ. ಸುಬ್ಬಾರೆಡ್ಡಿ, ಟಿಟಿಡಿ ಮಾಜಿ ಅಧ್ಯಕ್ಷ

ನಾಯ್ಡು ಆರೋಪದ ಅವಧಿಯಲ್ಲಿ ಲಡ್ಡುಗೆ ನಂದಿನಿ ತುಪ್ಪ ಬಳಸಿಲ್ಲ: ಕೆಎಂಎಫ್‌

 ಬೆಂಗಳೂರು :  ‘ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ತಯಾರಿಗೆ ದನ, ಹಂದಿ ಮಾಂಸ ಕೊಬ್ಬು ಬಳಸಲಾಗಿದೆ’ ಎಂಬ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಕ್ಕೂ, ನಂದಿನಿ ಬ್ರ್ಯಾಂಡ್‌ ತುಪ್ಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಸ್ಪಷ್ಟಪಡಿಸಿದ್ದಾರೆ.

‘ಇಡೀ ದೇಶದಲ್ಲೇ ನಂದಿನಿ ತುಪ್ಪ ನಂ.1 ಗುಣಮಟ್ಟದ್ದಾಗಿದೆ. ಆದ್ದರಿಂದ ಕೆಎಂಎಫ್‌ ತುಪ್ಪದ ಬಗ್ಗೆ ಚಂದ್ರಬಾಬು ನಾಯ್ಡು ಮಾತನಾಡಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಬಳಸಲಾದ ತುಪ್ಪದ ಕುರಿತು ಮಾತನಾಡಿದ್ದಾರೆ. ಆ ಅವಧಿಯಲ್ಲಿ (2020-24ರವರೆಗೆ) ನಾವು ತುಪ್ಪವನ್ನೇ ಕಳುಹಿಸಿಲ್ಲ. 2017ರಿಂದ 2018ರವರೆಗೆ ಕೆಎಂಎಫ್‌ನಿಂದ 4 ಸಾವಿರ ಮೆಟ್ರಿಕ್‌ ಟನ್‌ ತುಪ್ಪವನ್ನು ಕೊಟ್ಟಿದ್ದೇವೆ. 2018ರಲ್ಲಿ 17 ಮೆಟ್ರಿಕ್‌ ಟನ್‌ ತುಪ್ಪವನ್ನು ಸರಬರಾಜು ಮಾಡಿದ್ದೇವೆ. ಆ ನಂತರ ನಾಲ್ಕು ವರ್ಷ ಟಿಟಿಡಿಗೆ ತುಪ್ಪವನ್ನೇ ಕಳುಹಿಸಿಲ್ಲ’ ಎಂದು ಗುರುವಾರ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು.4 ವರ್ಷ ಬಳಿಕ ನಂದಿನಿ ಇತ್ತೀಚೆಗಷ್ಟೇ ದೇಗುಲಕ್ಕೆ ತುಪ್ಪ ಸರಬರಾಜು ಪುನರಾರಂಭ ಮಾಡಿತ್ತು.