ಗ್ಯಾನವಾಪಿ ಶಿವಲಿಂಗ ಕೊಳದಲ್ಲಿ ಇಂದು ಸ್ವಚ್ಛತಾ ಕಾರ್ಯ

| Published : Jan 20 2024, 02:00 AM IST / Updated: Jan 20 2024, 09:55 AM IST

ಸಾರಾಂಶ

ಕೊಳದಲ್ಲಿ ಮೀನು ಸತ್ತಿರುವ ಕಾರಣಕ್ಕೆ ಗ್ಯಾನವಾಪಿ ಮಸೀದಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಶನಿವಾರ ಸ್ವಚ್ಛತಾ ಕಾರ್ಯ ನಡೆಯಲಿದೆ.

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಆಕೃತಿಯ ಶಿಲೆ ಪತ್ತೆಯಾದ ವಜು಼ಖಾನಾ (ಕೊಳ) ಸ್ವಚ್ಛತಾ ಕಾರ್ಯವನ್ನು ಶನಿವಾರ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಇಲ್ಲಿ ಮೀನುಗಳು ಸತ್ತಿವೆ ಎಂಬ ಹಿಂದೂ ಅರ್ಜಿದಾರರ ಮನವಿ ಪರಿಗಣಿಸಿ ಸುಪ್ರೀಂ ಕೋರ್ಟ್, ಇದರ ಸ್ವಚ್ಛತೆಗೆ ಇತ್ತೀಚೆಗೆ ಆದೇಶಿಸಿತ್ತು. ಹೀಗಾಗಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ಅರ್ಜಿದಾರರ ಪರ ವಕೀಲ ಮದನ್‌ ಮೋಹನ್‌ ಯಾದವ್‌, ‘ಜ.16ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದನ್ವಯ ಗ್ಯಾನವಾಪಿ ಮಸೀದಿಯಲ್ಲಿರುವ ಕೊಳವನ್ನು ಸ್ವಚ್ಛಗೊಳಿಸುವ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಹಿಂದು ಅರ್ಜಿದಾರರು ಮತ್ತು ಮಸೀದಿ ಸಮಿತಿಯ ಕುರಿತು ಚರ್ಚಿಸಿದ್ದಾರೆ.

ಕೊಳದ ಸ್ವಚ್ಛತಾ ಕಾರ್ಯವು ಎಲ್ಲರ ಸಮ್ಮುಖದಲ್ಲಿ ಶನಿವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ 11 ಗಂಟೆಯ ಸುಮಾರಿಗೆ ಅಂತ್ಯಗೊಳ್ಳಲಿದೆ’ ಎಂದು ತಿಳಿಸಿದರು.