ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌, ಬಿಇಎಲ್‌ ಮತ್ತು ಬಿಇಎಂಎಲ್‌ನ ರಹಸ್ಯ ಮಾಹಿತಿ ಕದಿಯಲು ಪಾಕಿಸ್ತಾನ ಯತ್ನಿಸಿತ್ತು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌, ಬಿಇಎಲ್‌ ಮತ್ತು ಬಿಇಎಂಎಲ್‌ನ ರಹಸ್ಯ ಮಾಹಿತಿ ಕದಿಯಲು ಪಾಕಿಸ್ತಾನ ಯತ್ನಿಸಿತ್ತು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.ಕಳೆದ ಜೂನ್‌ನಿಂದ ಈ ವರ್ಷದ ಏಪ್ರಿಲ್‌ ಅವಧಿಯಲ್ಲಿ ಪಾಕಿಸ್ತಾನದ ಟ್ರಾನ್ಸ್‌ಪರೆಂಟ್‌ ಟ್ರೈಬ್‌ ಎಂಬ ಗುಪ್ತಚರ ಸಂಸ್ಥೆ ಹಲವು ಬಾರಿ ದಾಳಿ ನಡೆಸಿ ಮಾಹಿತಿ ಕದಿಯಲು ಯತ್ನಿಸಿತ್ತು ಎಂದು ಸೈಬರ್‌ ಭದ್ರತೆ ನೀಡುವ ಕೆನಡಾ ಮೂಲದ ಬ್ಲ್ಯೂಬೆರಿ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.ಪಾಕ್‌ ಹ್ಯಾಕರ್‌ಗಳು ಮುಖ್ಯವಾಗಿ ಭಾರತದ ರಕ್ಷಣಾ ವಲಯದ ಸಂಸ್ಥೆಗಳನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದರು. ಕೆಲ ಪ್ರಮುಖರಿಗೆ ಇ ಮೇಲ್‌ ಮೂಲಕ ಮಾಲ್ವೇರ್‌ ರವಾನಿಸಿ ಮಾಹಿತಿ ಕದಿಯುವ ಯತ್ನ ನಡೆಸಲಾಗಿತ್ತು. ಇದಲ್ಲದೆ ರಕ್ಷಣಾ ಸಲಕರಣೆ ಪೂರೈಕೆ ಮಾಡುವವರ ಮೇಲೂ ಹ್ಯಾಕರ್‌ಗಳೂ ನಿಗಾ ಇಟ್ಟಿದ್ದರು ಎಂದು ವರದಿ ಹೇಳಿದೆ. ಆದರೆ ಈ ಯತ್ನದಲ್ಲಿ ಅವು ಸಫಲವಾಗಿದ್ದವೇ? ಇಲ್ಲವೇ ಎಂಬ ಮಾಹಿತಿಯನ್ನು ಅದು ಬಹಿರಂಗಪಡಿಸಿಲ್ಲ. ಭಾರತದಲ್ಲಿ ಮಾತ್ರವಲ್ಲದೇ ಅಫ್ಘಾನಿಸ್ತಾನ ಹಾಗೂ ಇರಾನ್‌ ದೇಶಗಳ ರಕ್ಷಣಾ ವ್ಯವಸ್ಥೆ ಮೇಲೆಯೂ ಹ್ಯಾಕ್‌ ಯತ್ನ ನಡೆದಿತ್ತು. ಮಾಹಿತಿ ಕದಿಯಲು ರವಾನಿಸಿದ ಈ ಮೇಲ್‌ಗಳು ಪಾಕಿಸ್ತಾನದ ಕರಾಚಿಯಿಂದ ಕಳುಹಿಸಲ್ಪಟ್ಟಿತ್ತು ಎಂದು ಬ್ಲ್ಯೂಬೆರಿ ಬಿಡುಗಡೆ ಮಾಡಿದ 2023ರ ಗ್ಲೋಬಲ್‌ ಥ್ರೆಟ್‌ ಇಂಟಲಿಜೆನ್ಸ್‌ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದೆ.