ಭಾರತದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್‌ (ಕಣ್ಣುತಪ್ಪಿಸುವ) ಯುದ್ಧ ವಿಮಾನ ಎಎಂಸಿಎ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡುವ ಹೊಣೆಯಿಂದ ಬೆಂಗಳೂರು ಮೂಲದ ಎಚ್‌ಎಎಲ್‌ (ಹಿಂದುಸ್ಥಾನ ಏರೋನಾಟಿಕ್‌ ಲಿಮಿಟೆಡ್‌) ಹೊರಬಿದ್ದಿದೆ.

- ಎಎಂಸಿಎ ಯುದ್ಧ ವಿಮಾನ ಅಭಿವೃದ್ಧಿ ಹೊಣೆಯಿಲ್ಲ

- ಇನ್ನು 3-4 ವರ್ಷದಲ್ಲಿ ವಿಮಾನ ಪ್ರೊಟೋಟೈಪ್ ರೆಡಿ

- 3-4 ತಿಂಗಳಲ್ಲಿ ಎಎಂಸಿಎ ಗುತ್ತಿಗೆ ಕಂಪನಿ ಅಂತಿಮ

---

ನವದೆಹಲಿ: ಭಾರತದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್‌ (ಕಣ್ಣುತಪ್ಪಿಸುವ) ಯುದ್ಧ ವಿಮಾನ ಎಎಂಸಿಎ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡುವ ಹೊಣೆಯಿಂದ ಬೆಂಗಳೂರು ಮೂಲದ ಎಚ್‌ಎಎಲ್‌ (ಹಿಂದುಸ್ಥಾನ ಏರೋನಾಟಿಕ್‌ ಲಿಮಿಟೆಡ್‌) ಹೊರಬಿದ್ದಿದೆ. ಶೀಘ್ರದಲ್ಲಿ ಎಎಂಸಿಎ ಅಭಿವೃದ್ಧಿಪಡಿಸುವ ಕಂಪನಿಯ ಹೆಸರನ್ನು ಬಹಿರಂಗಪಡಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಕಾರ್ಯದರ್ಶಿ ರಾಜೇಶ್‌ ಕುಮಾರ್‌, ‘ದೇಶದ ಮೊದಲ ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಅಭಿವೃದ್ಧಿಪಡಿಸಲು 3 ಕಂಪನಿಗಳನ್ನು ಅಂತಿಮಗೊಳಿಸಲಾಗಿದೆ. ಅರ್ಹತಾ ಸುತ್ತಿನಿಂದ ಎಚ್‌ಎಎಲ್‌ ಹೊರಬಿದ್ದಿದೆ. ಗುತ್ತಿಗೆ ಪಡೆವ ಕಂಪನಿಯ ಹೆಸರನ್ನು 3-4 ತಿಂಗಳಲ್ಲಿ ಬಹಿರಂಗಪಡಿಸಲಾಗುವುದು. ಕಂಪನಿಯು ಇನ್ನು 3-4 ವರ್ಷಗಳಲ್ಲಿ ಎಎಂಸಿಎ ಮಾದರಿ (ಪ್ರೊಟೋಟೈಪ್‌) ವಿಮಾನಗಳನ್ನು ಅಭಿವೃದ್ಧಿಪಡಿಸಲಿವೆ. ಮುಂದಿನ ದಶಕದಲ್ಲಿ ಯುದ್ಧ ವಿಮಾನಗಳು ಸೇವೆಗೆ ಸೇರಲಿವೆ’ ಎಂದು ತಿಳಿಸಿದ್ದಾರೆ. ಆದರೆ 3 ಕಂಪನಿಗಳ ಹೆಸರು ಬಹಿರಂಗಪಡಿಸಿಲ್ಲ.

ಎಚ್‌ಎಎಲ್‌ ಹೊರಬಿದ್ದಿದ್ದೇಕೆ?

ವಿಫಲದ ಬಗ್ಗೆ ಅಧಿಕೃತ ಕಾರಣ ತಿಳಿದುಬಂದಿಲ್ಲವಾದರೂ, ದೇಶದ ಸಣ್ಣ ಯುದ್ಧ ವಿಮಾನ ತೇಜಸ್‌ ಎಂಕೆ-1 ಪೂರೈಕೆಯಲ್ಲಿ ಎಚ್‌ಎಎಲ್‌ ವಿಳಂಬ, ಇದರ ಮುಂದುವರಿದ ಭಾಗ ಎಂಕೆ2 ಇನ್ನು ಶುರುವಾಗದಿರುವುದು, ವಾಯುಪಡೆ ಮತ್ತು ಸರ್ಕಾರದಿಂದ ಎಚ್‌ಎಎಲ್‌ ಬಗ್ಗೆ ಅಸಮಾಧಾನ ಕಾರಣವಿರಬಹುದು ಎನ್ನಲಾಗಿದೆ.