ಸಾರಾಂಶ
ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಭೀಕರ ಕಾಲ್ತುಳಿತದ ಬಗ್ಗೆ ತಾರಾ ಆಟಗಾರ ವಿರಾಟ್ ಕೊಹ್ಲಿ ಮೂರು ತಿಂಗಳ ಬಳಿಕ ಮೌನ ಮುರಿದಿದ್ದಾರೆ. ‘
ಬೆಂಗಳೂರು : ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಭೀಕರ ಕಾಲ್ತುಳಿತದ ಬಗ್ಗೆ ತಾರಾ ಆಟಗಾರ ವಿರಾಟ್ ಕೊಹ್ಲಿ ಮೂರು ತಿಂಗಳ ಬಳಿಕ ಮೌನ ಮುರಿದಿದ್ದಾರೆ. ‘ತಂಡದ ಪಾಲಿಗೆ ಸಂಭ್ರಮದ ಕ್ಷಣವಾಗಬೇಕಿದ್ದ ದಿನ ದುರಂತವಾಗಿ ಬದಲಾಯಿತು’ ಎಂದು ಭಾವುಕರಾಗಿ ನುಡಿದಿದ್ದಾರೆ.
ಕೊಹ್ಲಿ ಹೇಳಿಕೆ ಇರುವ ಪೋಸ್ಟ್‌ವೊಂದನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಜೂ.4ರಂದು ನಡೆದ ದುರಂತದಂತಹ ಘಟನೆಗಳನ್ನು ಎದುರಿಸಲು ಜೀವನದಲ್ಲಿ ಯಾವುದೇ ತಯಾರಿ ಇರುವುದಿಲ್ಲ. ಪ್ರಾಂಚೈಸಿ ಪಾಲಿನ ಐತಿಹಾಸಿಕ ಕ್ಷಣ ದುರಂತವಾಗಿ ಬದಲಾಯಿತು. ಮೃತರ ಕುಟುಂಬಸ್ಥರು, ಗಾಯಾಳುಗಳ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಹಾಗೂ ಅವರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ತುಂಬಲಾರದ ನಷ್ಟ ಇದೀಗ ನಮ್ಮ ಭಾಗವಾಗಿದೆ. ನಾವೆಲ್ಲರೂ ಗೌರವ ಮತ್ತು ಜವಾಬ್ದಾರಿಯೊಂದಿಗೆ ಒಗ್ಗಟ್ಟಿನಿಂದ ಮುಂದುವರೆಯುತ್ತೇವೆ’ ಎಂದಿದ್ದಾರೆ. ಕಾಲ್ತುಳಿತದಲ್ಲಿ ಮಡಿದ 11 ಮಂದಿಯ ಕುಟುಂಬಸ್ಥರಿಗೆ ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ‘ಆರ್‌ಸಿಬಿ ಕೇರ್ಸ್’ ನಿಧಿಯಿಂದ ತಲಾ 25 ಲಕ್ಷ ರು. ಪರಿಹಾರ ಫೋಷಿಸಿತ್ತು.
- ಜೂ.3ರಂದು ಆರ್‌ಸಿಬಿ ಮೊದಲ ಬಾರಿ ಐಪಿಎಲ್ ಗೆದ್ದಿತ್ತು
- ಮರುದಿನ ಆರ್‌ಸಿಬಿ ಟೀಂ ಬೆಂಗಳೂರಿಗೆ ಬಂದಾಗ ಕಾಲ್ತುಳಿತ
- ಭೀಕರ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಅಸುನೀಗಿದ್ದರು
- ಈ ಬಗ್ಗೆ ಕೊಹ್ಲಿ ಸೇರಿ ಟೀಂ ಆಟಗಾರರು ಮೌನ ವಹಿಸಿದ್ದರು
- ಈಗ ಮೊದಲ ಬಾರಿ ಕೊಹ್ಲಿ ಹೇಳಿಕೆ ಹಂಚಿಕೊಂಡ ಆರ್‌ಸಿಬಿ
- ದುಃಖದಲ್ಲಿ ನಾನು ಭಾಗಿ ಎಂದು ಕೊಹ್ಲಿ ಮೊದಲ ಸಂದೇಶ