ಸಾರಾಂಶ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ಶಾಸಕರಿಗೆ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ಹಾಗೂ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಿಲ್ಲ. ಹೀಗಾಗಿಯೇ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸದಸ್ಯರಿಗೆ ವಿವರಣೆ ನೀಡಿದ್ದಾರೆ.ಮಂಗಳವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿ, ಪ್ರತಿಪಕ್ಷಗಳು ವಿಧಾನಮಂಡಲ ಉಭಯ ಸದನಗಳಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ದುರಂತ ಪ್ರಸ್ತಾಪಿಸಿವೆ. ಈ ಬಗ್ಗೆ ಸರ್ಕಾರವು ಬುಧವಾರ ಉತ್ತರ ನೀಡಲಿದೆ. ಈ ವೇಳೆ ಕಾಂಗ್ರೆಸ್ ಶಾಸಕರು ಗಟ್ಟಿಯಾಗಿ ಸರ್ಕಾರದ ಜತೆ ನಿಲ್ಲಬೇಕು ಎಂದು ತಿಳಿಸಿದರು ಎನ್ನಲಾಗಿದೆ.
ಇದೇ ವೇಳೆ ದುರ್ಘಟನೆ ಬಗ್ಗೆ ಸ್ಪಷ್ಟ ಚಿತ್ರ ನೀಡಿದ ಸಿದ್ದರಾಮಯ್ಯ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಆಗಿರುವ ಬಗ್ಗೆ ಹಾಗೂ ಸಾವು ಸಂಭವಿಸಿರುವ ಬಗ್ಗೆ ಅಧಿಕಾರಿಗಳು ನಮಗೆ ಮಾಹಿತಿ ನೀಡಿರಲಿಲ್ಲ. ಮೊದಲ ಸಾವು ಸಂಭವಿಸಿದಾಗಲೇ ಮಾಹಿತಿ ನೀಡಿದ್ದರೆ ವಿಧಾನಸೌಧ ಭವ್ಯ ಮೆಟ್ಟಿಲ ಮೇಲಿನ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೆವು. ಕಾರ್ಯಕ್ರಮ ಮುಗಿದ ಬಳಿಕವೂ ನಮಗೆ ಸಾವಿನ ಬಗ್ಗೆ ಮಾಹಿತಿ ಇರಲಿಲ್ಲ. ಸಂಜೆ 5.30 ಗಂಟೆಗೆ ಎ.ಎಸ್. ಪೊನ್ನಣ್ಣ ಅವರು ನನಗೆ ಮಾಹಿತಿ ನೀಡಿದರು. ಬಳಿಕ ನಾನು ನಗರ ಪೊಲೀಸ್ ಆಯುಕ್ತರನ್ನು ವಿಚಾರಿಸಿದರೆ ಆಗ ಅವರು ಸಾವು ಖಚಿತಪಡಿಸಿದರು. ಆಗಲೂ ನನಗೆ ಸರಿಯಾದ ಸಾವಿನ ಸಂಖ್ಯೆ ನೀಡಿರಲಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಯಿತು ಎಂದು ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.ಸಿಎಲ್‌ಪಿಗೆ ಕೆ.ಎನ್.ರಾಜಣ್ಣ ಗೈರು
ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್. ರಾಜಣ್ಣ ಅವರು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡಿರುವ ಅವರು ಶಾಸಕರಾಗಿ ಭಾಗವಹಿಸಬಹುದಿತ್ತು ಆದರೆ ಸಿಎಲ್‌ಪಿಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಇದೇ ವೇಳೆ ಅವರ ಪುತ್ರ ಹಾಗೂ ಪರಿಷತ್ ಸದಸ್ಯ ರಾಜೇಂದ್ರ ಅವರು ಸಭೆಯಲ್ಲಿ ಹಾಜರಾತಿ ಹಾಕಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಬೇಗನೇ ಹೊರ ನಡೆದರು ಎಂದು ತಿಳಿದುಬಂದಿದೆ.