ಸಾರಾಂಶ
ಹರಿಯಾಣದಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಜೆಜೆಪಿ ಮೈತ್ರಿ ಸರ್ಕಾರ ಸದನದ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಚಂಡೀಗಢ: ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದ್ದು, ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟ ಸದನದ ವಿಶ್ವಾಸ ಸಾಬಿತುಪಡಿಸುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಪಕ್ಷವು ನಾಲ್ಕು ಗಂಟೆಗಳ ಕಾಲ ಅವಿಶ್ವಾಸ ನಿರ್ಣಯದ ಕುರಿತು ಚರ್ಚಿಸಿದ ಬಳಿಕ ಸಭಾತ್ಯಾಗ ಮಾಡಿತು. ಬಳಿಕ ಸದನದಲ್ಲಿ ಹಾಜರಿದ್ದ ಬಿಜೆಪಿ, ಜೆಜೆಪಿ, ಹೆಚ್‌ಎಲ್‌ಪಿ ಮತ್ತು ಪಕ್ಷೇತರ ಶಾಸಕರು ಧ್ವನಿಮತದ ಮೂಲಕ ವಿಶ್ವಾಸಮತವನ್ನು ಅಂಗೀಕರಿಸಿದರು.
ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಹರ್ಯಾಣದ 90 ಸ್ಥಾನಗಳ ವಿಧಾನಸಭೆಯಲ್ಲಿ 41 ಕ್ಷೇತ್ರವನ್ನು ಹೊಂದಿದ್ದು, ಜೆಜೆಪಿ, ಹೆಚ್‌ಎಲ್‌ಪಿ ಮತ್ತು ಆರು ಪಕ್ಷೇತರರು ಸೇರಿ 58 ಸದಸ್ಯರ ಬಲ ಹೊಂದಿದೆ ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 30 ಸ್ಥಾನಗಳನ್ನು ಹೊಂದಿದ್ದು, ತಲಾ ಒಬ್ಬರು ಐಎನ್‌ಎಲ್‌ಡಿ, ಪಕ್ಷೇತರ ಶಾಸಕರ ಬೆಂಬಲ ಹೊಂದಿದೆ.