ಸಾರಾಂಶ
ರೈತರ ಮೇಲೆ ಎನ್‌ಎಸ್‌ಎ ಕೇಸು ತೀರ್ಮಾನ ಕೈಬಿಟ್ಟ ಹರ್ಯಾಣ ಸರ್ಕಾರ, ರೈತರು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿಕೊಂಡಿದೆ. ಈ ಆದೇಶಕ್ಕೆ ವಿರೋಧದ ಬೆನ್ನಲ್ಲೇ ಒಂದೇ ದಿನದಲ್ಲಿ ಆದೇಶ ರದ್ದು ಮಾಡಲಾಗಿದೆ.
ಚಂಡೀಗಢ: ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಕಠಿಣ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದ ಆದೇಶವನ್ನು ಒಂದೇ ದಿನದಲ್ಲಿ ಹರ್‍ಯಾಣ ಪೊಲೀಸರು ರದ್ದು ಮಾಡಿದ್ದಾರೆ. ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಅಂಬಾಲಾ ಐಜಿಪಿ ಸಿಬಶ್ ಕಬಿರಾಜ್, ‘ಸಾಮಾಜಿಕ ಕ್ಷೋಭೆ ಉಂಟು ಮಾಡಿದ ಕೆಲವು ರೈತ ನಾಯಕರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ದೇಶಿಸಿದ್ದ ಕ್ರಮವನ್ನು ಮರುಪರಿಶೀಲನೆ ಮಾಡಿ ಹಿಂಪಡೆಯಲಾಗಿದೆ. ಇನ್ನು ಮುಂದೆ ರೈತರು ಪ್ರತಿಭಟನೆಯ ಶಾಂತಿ ಸೌಹಾರ್ದತೆ ಕಾಪಾಡುವಂತೆ ವಿನಂತಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಎನ್ಎಸ್‌ಎ ಕೇಸನ್ನು ಸಮಾಜಘಾತಕರು, ಉಗ್ರರ ಮೇಲೆ ದಾಖಲಿಸಲಾಗುತ್ತದೆ.ರೈತನಿಗೆ 1 ಕೋಟಿ ರು. ಪರಿಹಾರ:ಈ ನಡುವೆ ಪಂಜಾಬ್ ಗಡಿಯಲ್ಲಿ ಗಲಭೆಯ ವೇಳೆ ಮೃತಪಟ್ಟ ರೈತ ಶುಭ್‌ಕರಣ್ ಸಿಂಗ್ ಕುಟುಂಬಕ್ಕೆ ಪಂಜಾಬ್‌ನ ಆಪ್ ಸರ್ಕಾರ 1 ಕೋಟಿ ರು. ಪರಿಹಾರ ಘೋಷಿಸಿ ಆತನ ಸೋದರಿಗೆ ಸರ್ಕಾರಿ ಉದ್ಯೋಗ ನೀಡಿದೆ.